ಬೆಳಗಾವಿ: ಇದು ಭಾರತದ ಮೊಟ್ಟ ಮೊದಲ ಮತ್ತು ಕರ್ನಾಟಕದ ಏಕೈಕ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ. ಕಳೆದ 56 ವರ್ಷಗಳಿಂದ ಸಹಕಾರ ತತ್ವದಡಿ ಸಂಘ ಮುನ್ನಡೆಯುತ್ತಿದೆ. ಇದನ್ನು ಹುಟ್ಟು ಹಾಕಿದ್ದು, ಓರ್ವ ಸಹಕಾರಿ ಭೀಷ್ಮ. ಆ ಮಹಾನಾಯಕನ ದೂರದೃಷ್ಟಿಯ ಫಲದಿಂದ ಲಕ್ಷಾಂತರ ಕುಟುಂಬಗಳಿಗೆ ಬೆಳಕು ಸಿಕ್ಕಿದೆ. ಸಾವಿರಾರು ಕುಟುಂಬಗಳಿಗೆ ಉದ್ಯೋಗದ ಆಸರೆ ದಕ್ಕಿದೆ. ಈಗ ಸಂಘದ ಮೇಲೆ ಅಧಿಪತ್ಯ ಸಾಧಿಸಲು ಎರಡು ಪ್ರಬಲ ರಾಜಕೀಯ ಕುಟುಂಬಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.
ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಕಂಪನಿಗಳಿಂದ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ, ಹುಕ್ಕೇರಿ ತಾಲೂಕಿನಲ್ಲಿ ಮಾತ್ರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ವಿದ್ಯುತ್ ಪೂರೈಕೆ ಮಾಡುತ್ತಿದೆ. ಇಂಥ ಸಂಘ ಆರಂಭಿಸಿದ್ದು ಓರ್ವ ಸ್ವಾತಂತ್ರ್ಯ ಸೇನಾನಿ, ಸಹಕಾರಿ ಧುರೀಣರಾದ ದಿ.ಅಪ್ಪಣಗೌಡ ಪಾಟೀಲರು.ದೆಹಲಿಯ ಗ್ರಾಮೀಣ ವಿದ್ಯುದೀಕರಣ ಕಾರ್ಪೋರೇಶನ್ ಲಿಮಿಟೆಡ್ ದೇಶಾದ್ಯಂತ ಐದು ಸಹಕಾರಿ ಸಂಘಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿತ್ತು. ಅದರಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ದಿ.ಅಪ್ಪಣಗೌಡರ ಮುತುವರ್ಜಿಯಿಂದ ಮೊಟ್ಟ ಮೊದಲ ಸಂಘವು 1969ರ ಜುಲೈ 31ರಂದು ಅಸ್ತಿತ್ವಕ್ಕೆ ಬಂತು. ಕರ್ನಾಟಕ ಸಹಕಾರ ಸಂಘಗಳ ಕಾನೂನು 1959 ಇದಕ್ಕೆ ಅನ್ವಯಿಸುತ್ತದೆ. ಕಳೆದ 56 ವರ್ಷಗಳಿಂದ ಹುಕ್ಕೇರಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಈ ಸಂಘವೇ ವಿದ್ಯುತ್ ಸರಬರಾಜು ಮಾಡುತ್ತಿರುವುದು ವಿಶೇಷ.
ಒಟ್ಟು 1.47 ಲಕ್ಷ ವಿದ್ಯುತ್ ಸಂಪರ್ಕ: ಹುಕ್ಕೇರಿ ತಾಲೂಕಿನ 125ಕ್ಕೂ ಅಧಿಕ ಗ್ರಾಮಗಳು, ಚಿಕ್ಕೋಡಿ ತಾಲೂಕಿನ ಕಮತ್ಯಾನಟ್ಟಿ, ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಮನೆ, ರೈತರ ಪಂಪ್ಸೆಟ್, ವಾಣಿಜ್ಯ ಮಳಿಗೆಗಳು, ಕಣಗಲಾ ಕೈಗಾರಿಕಾ ವಲಯ ಸೇರಿ ಒಟ್ಟು 1,47,000 ವಿದ್ಯುತ್ ಜೋಡಣೆಗಳನ್ನು ಹೊಂದಿದ್ದು, ಅದರಲ್ಲಿ 1,01,500 ಗೃಹಬಳಕೆ ವಿದ್ಯುತ್ ಸಂಪರ್ಕ ಇದೆ. ಸುಮಾರು 97,000 ಶೇರುದಾರರು ಈ ಸಂಘದಲ್ಲಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಈ ಬಾರಿ 60,934 ಮತದಾರರು 15 ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ.
402 ಸಿಬ್ಬಂದಿಗೆ ಕೆಲಸ: ಈ ಸಂಘದಲ್ಲಿ ವ್ಯವಸ್ಥಾಪಕ ನಿರ್ದೇಶಕ, ಇಂಜಿನಿಯರ್ಸ್, ಲೈನ್ ಮೆನ್, ಮೀಟರ್ ರೀಡರ್ಸ್, ಸಿಪಾಯಿಗಳು, ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು 402 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹುಕ್ಕೇರಿಯಲ್ಲಿ 3 ಎಕರೆ ಪ್ರದೇಶದಲ್ಲಿ ವಿದ್ಯುತ್ ಗ್ರಾಮೀಣ ಸಹಕಾರಿ ಸಂಘದ ಕಚೇರಿ, ಟಿಸಿ ದುರಸ್ಥಿ ಮತ್ತು ಪುನಶ್ಚೇತನ ಕೇಂದ್ರ, ಗೋದಾಮು, ವಿದ್ಯುತ್ ಕಂಬ ತಯಾರಿಕಾ ಘಟಕ, ಲೈನ್ ಸಲಕರಣೆ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ವರ್ಕ್ಶಾಪ್ನಲ್ಲಿ ವಿದ್ಯುತ್ ಕಂಬಕ್ಕೆ ಬಳಕೆ ಆಗುವ ಚನಲ್, ಗಯರಾಡ್, ಮೇನ್ ಲೈನ್ ವಾಯರ್ ಸೇರಿದಂತೆ ಮತ್ತಿತರ ಪರಿಕರಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. 11 ಸ್ಟೇಷನ್ಗಳನ್ನು ಸಂಘ ಹೊಂದಿದ್ದು, ಸಂಕೇಶ್ವರದಲ್ಲಿ ಕಂಬ ತಯಾರಿಕಾ ಘಟಕ ಇದೆ.

‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಏಕರೂಪದ ದರ ನಿಗದಿ ಪಡಿಸುತ್ತದೆ. ಹೆಸ್ಕಾಂನಿಂದ ವಿದ್ಯುತ್ ಖರೀದಿಸಿ ತಾಲೂಕಿನಾದ್ಯಂತ ಅದೇ ದರದಲ್ಲಿ ವಿದ್ಯುತ್ ಸರಬರಾಜು ಮಾಡುತ್ತೇವೆ. ನಮ್ಮ ಕಾರ್ಯವೈಖರಿಯನ್ನು ಕೆಇಆರ್ಸಿ ಮಾನಿಟರ್ ಮಾಡುತ್ತದೆ. ಆಡಳಿತ ಮತ್ತು ಸಿಬ್ಬಂದಿ ವೆಚ್ಚ ಬೇರೆ ಕಂಪನಿಗಳಲ್ಲಿ 1 ರೂ. 80 ಪೈಸೆ ಇದ್ದರೆ, ನಮ್ಮಲ್ಲಿ 1 ಯೂನಿಟ್ಗೆ 98 ಪೈಸೆ ಮಾತ್ರ ಇರುತ್ತದೆ. ತ್ವರಿತವಾಗಿ ಟಿಸಿ ಬದಲಾವಣೆ, ಹೊಸದಾಗಿ ವಿದ್ಯುತ್ ಸಂಪರ್ಕ, ಟಿಸಿ ಸಾಮರ್ಥ್ಯ ಹೆಚ್ಚಿಸುವುದು ಸೇರಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಿದ್ದೇವೆ’ ಎಂದು ಹುಕ್ಕೇರಿ ವಿದ್ಯುತ್ ಗ್ರಾಮೀಣ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ವಿವರಿಸಿದರು.
Laxmi News 24×7