ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಭಾನುವಾರ ರಾತ್ರಿ ಕುಮಟಾದ ಮುಸುಗುಪ್ಪ ಬಳಿ ಬೃಹತ್ ಬಂಡೆಗಳ ಸಹಿತ ಗುಡ್ಡ ಕುಸಿತವಾಗಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿತ್ತು.
ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೇವಿಮನೆ ಘಟ್ಟ ಸೇರಿದಂತೆ ಹಲವೆಡೆ ಗುಡ್ಡ ಕುಸಿತಗೊಂಡ ಬೆನ್ನಲ್ಲೇ ಇದೀಗ ಮೂರೂರು ಭಾಗದಲ್ಲಿಯೂ ಕಟ್ಟಿಂಗ್ ಮಾಡಿದ್ದ ಧರೆಭಾಗ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿತ್ತು.
“ಕುಮಟಾ ತಾಲೂಕಿನ ಮೂರೂರು-ಮುಸುಗುಪ್ಪ ರಸ್ತೆಯಲ್ಲಿ ಬಿದ್ದಂತಹ ಕಲ್ಲು ಬಂಡೆಯನ್ನು ತೆರವುಗೊಳಿಸಲು ಪಿಡಬ್ಲೂಡಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಪರ್ಯಾಯವಾಗಿ ಮೂರೂರು-ಕುಮಟಾ ಹೈವೇ ರಸ್ತೆಯಿಂದ ಹೋಗಲು ದಾರಿ ಇದೆ. ಹರ್ಕಡೆ – ಬಳಕೂರು ರಸ್ತೆಯಿಂದ ವಾಹನಗಳಿಗೆ ಹೋಗಲು ದಾರಿ ಮಾಡಿ ಕೊಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವಕನ ಶವ ಪತ್ತೆ: ಮೀನು ಹಿಡಿಯಲು ಹೋಗಿ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕ ಭಾನುವಾರ ಶವವಾಗಿ ಪತ್ತೆಯಾಗಿದ್ದಾನೆ. ಕಾರವಾರದ ಕಡವಾಡ ಗ್ರಾಮದ ಮಾಡಿಭಾಗದ ಸಂತೋಷ ರಾಯ್ಕರ್ (35) ನದಿಯಲ್ಲಿ ಬಿದ್ದು ಸಾವು ಕಂಡ ಯುವಕ. ಕಾರವಾರ ತಾಲೂಕಿನ ಸುಂಕೇರಿ ಬಳಿ ಶನಿವಾರ ಮೀನು ಹಿಡಿಯಲು ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ.
ಯುವಕ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಹುಡುಕಾಟ ನಡೆಸಲಾಗಿತ್ತು. ಭಾನುವಾರ ಕಾಳಿ ನದಿ ತಟದ ಸುಂಕೇರಿ ತೀರಭಾಗದಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7