ಬೆಂಗಳೂರು : ಅಣ್ಣನನ್ನು ಸಿಎಂ ಮಾಡಬೇಕೆಂಬ ಆಸೆ ಇದೆ ಎಂದು ಈಗಲೂ ಹೇಳುತ್ತೇನೆ. ನಾನು ನನ್ನ ಆಸೆ ಮುಚ್ಚಿಟ್ಟಿಲ್ಲ. ಅದಕ್ಕೂ ಕಾಲ ಬರಬೇಕು ಎಂದು ಮಾಜಿ ಸಂಸದ ಡಿ. ಕೆ ಸುರೇಶ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಶನಿವಾರ ಮಾತನಾಡಿದ ಅವರು, ಈಗ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಕುಳಿತಿದ್ದಾರೆ. ಅವರನ್ನು ಎಳೆದು ಇವರನ್ನು ಕೂರಿಸಬೇಕು. ಅದು ಹೇಗಾಗುತ್ತದೆ. ಸಿದ್ದರಾಮಯ್ಯ ಅವರು ಆ ಸ್ಥಾನದಲ್ಲಿ ಕುಳಿತಿರುವಾಗ ಅವರ ಗೌರವ, ಘನತೆ, ಅವರ ಮೇಲೆ ಇರುವ ನಂಬಿಕೆ ಎಲ್ಲವನ್ನು ಚಿಂತನೆ ಮಾಡಬೇಕು. ಇದೆಲ್ಲವನ್ನು ಪಕ್ಷ ಮಾಡುತ್ತದೆ. ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಈಗ ಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಆ ಕಾಲ ಬರುತ್ತದೆಯೋ ಇಲ್ಲವೋ ನನಗೇನು ಗೊತ್ತು?. ನಾನು ಹೇಗೆ ಹೇಳಲು ಸಾಧ್ಯ? ಎಂದರು.
ನಿಮಗೆ ನಂಬಿಕೆ ಇದೆಯೇ ಎಂದು ಕೇಳಿದಾಗ, “ಡಿ. ಕೆ ಶಿವಕುಮಾರ್ ಅವರು ಇರುವುದೇ ನಂಬಿಕೆ ಮೇಲೆ. ಎಲ್ಲರೂ ನಂಬಿಕೆ ಮೇಲೆ ಬದುಕಬೇಕು. ನಂಬಿಕೆ ಇಲ್ಲದೆ ಬದುಕಲು ಸಾಧ್ಯವೇ? ಎಲ್ಲರೂ ಮತ್ತೊಬ್ಬರನ್ನು ನಂಬಿಯೇ ಜೀವನ ಮಾಡಬೇಕು” ಎಂದರು.
ಹೈಕಮಾಂಡ್ ಭೇಟಿಗೆ ವಿಶೇಷ ಅರ್ಥ ಬೇಡ : ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾರೆ ಎಂದರೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಪಕ್ಷದ ಅಧ್ಯಕ್ಷರು. ಪ್ರತಿ ತಿಂಗಳು, 15 ದಿನಕ್ಕೊಮ್ಮೆ ದೆಹಲಿಗೆ ಹೋಗುತ್ತಾರೆ. ಅಧ್ಯಕ್ಷ ಸ್ಥಾನದಲ್ಲಿ ಇದ್ದಾಗ, ಇಲ್ಲದಿದ್ದಾಗಲೂ ಅವರು ಹೈಕಮಾಂಡ್ ನಾಯಕರ ಜತೆ ನಿರಂತರ ಒಡನಾಟ ಇಟ್ಟುಕೊಂಡಿರುತ್ತಾರೆ. ಅವರು ಸರ್ಕಾರಿ ಅಥವಾ ಖಾಸಗಿ ಕೆಲಸದ ಮೇಲೆ ದೆಹಲಿಗೆ ಹೋದರೂ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಹೀಗಾಗಿ, ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸರ್ಕಾರದ ಉತ್ತಮ ಆಡಳಿತ, ಪಕ್ಷ ಸಂಘಟನೆ ಹೊರತಾಗಿ ಶಿವಕುಮಾರ್ ಅವರಿಗೆ ಬೇರೆ ಯಾವುದೇ ಅಜೆಂಡಾ ಇಲ್ಲ. ಅವರು ಈಗ ಉಪಮುಖ್ಯಮಂತ್ರಿಯಾಗಿದ್ದು, ಹಕ್ಕು ಪ್ರತಿಪಾದಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ್ ಕದ್ದುಮುಚ್ಚಿ ಯಾರನ್ನೂ ಭೇಟಿ ಮಾಡಿಲ್ಲ : ಶಿವಕುಮಾರ್ ಅವರು ಪ್ರಧಾನಿ ಭೇಟಿಯಾಗುವಾಗ, ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಹೈಕಮಾಂಡ್ಗೆ ತಿಳಿಸಿದ್ದರು. ಅವರು ಕದ್ದುಮುಚ್ಚಿ ಹೋಗಿಲ್ಲ. ಸಾರ್ವಜನಿಕವಾಗಿ ತಿಳಿಸಿಯೇ ಹೋಗಿದ್ದರು. ಸದ್ಗುರು ಅವರು ಮನೆಗೆ ಬಂದು ಆಹ್ವಾನ ನೀಡಿದ್ದರು. ಆಹ್ವಾನ ಸ್ವೀಕರಿಸಿ ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಶಿವಕುಮಾರ್ ಮೊದಲಿನಿಂದಲೂ ದೇವರ ಮೇಲೆ ಭಕ್ತಿ ಹೊಂದಿದ್ದವರು. ಶಿವಕುಮಾರ್ ಎಂದು ಹೆಸರು ಬಂದಿದ್ದೆ ಶಿವನ ಹರಕೆಯಿಂದ. ಅವರು ಜನಿಸಿದ ಕಾರಣ ನಮ್ಮ ತಂದೆ- ತಾಯಿ ಅವರಿಗೆ ಶಿವಕುಮಾರ್ ಎಂದು ಹೆಸರಿಟ್ಟರು.
Laxmi News 24×7