ಬೆಂಗಳೂರು: ”ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಚಿತ್ರರಂಗ ಭಾಗವಹಿಸಬೇಕು. ನಾವು ನಿಮ್ಮ ಶೂಟಿಂಗ್‌ಗೆ ಅವಕಾಶ ಕೊಡದಿದ್ರೆ, ನೀವು ಹೇಗೆ ಸಿನಿಮಾ ಮಾಡ್ತೀರಿ?. ನಾವೂ ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ. ಇದು ನನ್ನ ವಾರ್ನಿಂಗ್ ಅಂತಲಾದ್ರೂ ತಿಳಿದುಕೊಳ್ಳಿ, ರಿಕ್ವೆಸ್ಟ್ ಅಂತಲಾದ್ರೂ ತಿಳಿದುಕೊಳ್ಳಿ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.
ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ”ಈ ಕಾರ್ಯಕ್ರಮ ಇಲ್ಲಿ ವೇದಿಕೆ ಮೇಲಿರುವ ಕೆಲವು ಕಲಾವಿದರು ಹಾಗೂ ರಾಜಕಾರಣಿಗಳ ಮನೆ ಕಾರ್ಯಕ್ರಮವಲ್ಲ. ಚಿತ್ರರಂಗದ ಕಾರ್ಯಕ್ರಮ. ಆದರೆ ಕೆಲವೇ ಕೆಲವು ಪ್ರಮುಖರು ಮಾತ್ರ ಇದ್ದಾರೆ. ಇದು ಕನ್ನಡ ಸಿನಿಮಾ ರಂಗದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರಲ್ಲದೆ ಮತ್ಯಾರು ಬರುತ್ತಾರೆ? ಶಿವರಾಜಕುಮಾರ್ ಅವರು ಇದನ್ನು ನಮ್ಮ ಮನೆಯ ಹಬ್ಬ ಎಂದು ಹೇಳಿದರು. ಆ ಭಾವನೆ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರಿಗೆ ಇಲ್ಲವಾದರೆ, ನಿಮಗೇ ಆಸಕ್ತಿ ಇಲ್ಲವಾದರೆ ಈ ಚಲನಚಿತ್ರೋತ್ಸವವನ್ನು ಯಾಕೆ ಮಾಡಬೇಕು” ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿಯಾದರೂ ಇಂತಹ ಕಾರ್ಯಕ್ರಮಗಳಿಗೆ ಚಿತ್ರರಂಗದ ಪ್ರಮುಖರು ಆಗಮಿಸಬೇಕು. ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಹೇಗೆ? ಇದನ್ನು ಎಚ್ಚರಿಕೆಯಂತಾದರೂ ಪರಿಗಣಿಸಿ ಅಥವಾ ಮನವಿ ಎಂದಾದರೂ ಪರಿಗಣಿಸಿ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ಸರ್ಕಾರ ಅನುಮತಿ ನೀಡದೆ ಇದ್ದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶವೇ ಸಿಗುವುದಿಲ್ಲ. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ” ಎಂದರು.
ಮೇಕೆದಾಟು ಪಾದಯಾತ್ರೆಗೆ ಬೆಂಬಲ ನೀಡದ್ದಕ್ಕೆ ಬೇಸರ ಇದೆ : ”ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ ಮೇಕೆದಾಟು ಹೋರಾಟಕ್ಕೆ ಚಿತ್ರರಂಗದಿಂದ ಸರಿಯಾದ ಸಹಕಾರ ಸಿಗದೇ ಹೋದದ್ದರ ಬಗ್ಗೆ ನೋವು ಮತ್ತು ಸಿಟ್ಟು ಇದೆ. ನನಗೆ ಸಿನಿಮಾ ರಂಗದವರ ಮೇಲೆ ಕೋಪ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ, ನಟರ ಮೇಲೆ ಸಿಟ್ಟಿದೆ. ನಾವು ಕಷ್ಟ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ದೊರಕಿಸಲು ‘ನಮ್ಮ ನೀರು, ನಮ್ಮ ಹಕ್ಕು’ ಎಂದು ಮೇಕೆದಾಟು ಪಾದಯಾತ್ರೆ ಮಾಡಿದೆವು. ಕೋವಿಡ್ ಸಮಯದಲ್ಲಿ ನಾನು, ಸಿದ್ದರಾಮಯ್ಯ ಅವರು ಸುಮಾರು 150 ಕಿ.ಮೀ ಪಾದಯಾತ್ರೆ ಮಾಡಿದೆವು. ನಾವು ನಮ್ಮ ಸ್ವಂತಕ್ಕಾಗಿ ಈ ಹೋರಾಟ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ನಡೆದೆವು. ಆದರೆ ಖುದ್ದು ಆಹ್ವಾನ ಕೊಟ್ಟರೂ ಒಂದಿಬ್ಬರನ್ನು ಹೊರತುಪಡಿಸಿ ಚಿತ್ರರಂಗದವರು ತಿರುಗಿ ನೋಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
”ಅಸೋಸಿಯೇಷನ್ನಿಂದ ಕೆಲವರು ಮಾತ್ರ ಬಂದಿದ್ದರು. ಕಲಾವಿದರ ಪೈಕಿ, ಸಾಧು ಕೋಕಿಲ ಹಾಗೂ ದುನಿಯಾ ವಿಜಿ ಅವರನ್ನು ಬಿಟ್ಟರೆ ಮತ್ಯಾರು ಭಾಗವಹಿಸಲಿಲ್ಲ. ಕೆಲವರು ನಟರನ್ನು ಬಳಸಿಕೊಂಡು ನಂತರ ಬಿಸಾಡುತ್ತಾರೆ. ನಾವು ಆ ರೀತಿ ಮಾಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಮ್ಮ ಕಷ್ಟ ಕಾಲದಲ್ಲಿ ಯಾರು ನಮಗೆ ಸಹಾಯ ಮಾಡುತ್ತಾರೋ ಅವರನ್ನು ಗುರುತಿಸಬೇಕು. ನಮಗೆ ಎಲ್ಲ ರಂಗದಲ್ಲಿಯೂ ಯಾರ್ಯಾರ ನಾಡಿ ಮಿಡಿತ ಏನಿದೆ ಎಂಬುದರ ಅರಿವಿದೆ. ಕಷ್ಟ ಕಾಲದಲ್ಲಿ ಆಗದಿದ್ದ ಮೇಲೆ ಏನು ಪ್ರಯೋಜನ” ಎಂದು ಪ್ರಶ್ನಿಸಿದರು.
Laxmi News 24×7