Breaking News

ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಮರು ಮತ ಎಣಿಕೆ ನಡೆಸಲು ಕೋರ್ಟ್​ ಆದೇಶ

Spread the love

ಚಿಕ್ಕೋಡಿ(ಬೆಳಗಾವಿ): ಪಂಚಾಯತ್​ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದ ಬಳಿಕ ಮರು ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶ ಹೊರಡಿಸಿದ್ದು, ಎಲ್ಲರ ಚಿತ್ತ ಕೋರ್ಟ್​ನತ್ತ ನೆಟ್ಟಿದೆ. ಈ ಆದೇಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬರುವ ಅ.20 ರಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23 ರಂದು ಚುನಾವಣೆ ನಡೆದಿತ್ತು. ಚುನಾವಣಾ ಫಲಿತಾಂಶ ಕೂಡ ಡಿ.30 ರಂದು ಹುಕ್ಕೇರಿಯಲ್ಲಿ ಪ್ರಕಟವಾಗಿತ್ತು. ಈ ಚುನಾವಣಾ ಫಲಿತಾಂಶದಲ್ಲಿ ಹೆಬ್ಬಾಳ ಗ್ರಾಮದ ವಾರ್ಡ್ ನಂ 2ರ ಹಿಂದುಳಿದ “ಬ” ಸ್ಥಾನಕ್ಕೆ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದು ಕೊನೆಗೆ ಕೇವಲ ಒಂದೇ ಒಂದು ಮತದಿಂದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದರು. ಆದರೆ, ಈ ಬಗ್ಗೆ ಅಸಮಾಧಾನಗೊಂಡಿದ್ದ ಪರಾಜಿತ ಅಭ್ಯರ್ಥಿ ಮರು ಮತ ಎಣಿಕೆ ನಡೆಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು.

ಒಂದು ಮತದಿಂದ ಸೋತ್ತಿದ್ದ ಹೆಬ್ಬಾಳ ಗ್ರಾಮದ ರಾವಸಾಹೇಬ ಪಾಟೀಲ, ಸಂಕೇಶ್ವರ ಪಟ್ಟಣದ ದಿವಾನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಾದ ಪ್ರತಿ ವಾದ ಆಲಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಅವರು ಮರು ಎಣಿಕೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಕೋರ್ಟ್ ತೀರ್ಪಿನಿಂದ ಸೋತ ಅಭ್ಯರ್ಥಿ ಹುಮ್ಮಸ್ಸಿನಲ್ಲಿದ್ದರೆ, ಗೆದ್ದ ಅಭ್ಯರ್ಥಿಗೆ ದುಗುಡ ಶುರುವಾಗಿದೆ. ಇತ್ತ ಕೋರ್ಟ್‌ ಆದೇಶವೂ ಕುತೂಹಲ ಮೂಡಿಸಿದೆ. ರಾವಸಾಹೇಬ್ ಪರವಾಗಿ ನ್ಯಾಯವಾದಿ ಸಂಜು ಮಹದುಮ್ ವಾದ ಮಂಡಿಸಿದ್ದಾರೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ