ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ನಲ್ಲಿನ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಸ್ವಚ್ಛತೆ ಕೊರತೆ, ಊಟ, ನೀರಿನ ಸೌಲಭ್ಯ ಸರಿಯಾಗಿ ಇಲ್ಲದಿರುವುದು, ಮುಖ್ಯವಾಗಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಅನ್ನೋ ಸೋಂಕಿತರ ಆರೋಪ ಈಗಲೂ ಮುಂದುವರೆದಿದೆ.ಊಟ, ತಿಂಡಿ, ನೀರಿಗಾಗಿ ರೋಗಿಗಳ ಜೊತೆಗೆ ಇರುವವರು ಹಾಗೂ ರೋಗಿಗಳು ಸಹ ಹೊರಗೆ ಬಂದು ಹೋಟೆಲ್‍ಗಳಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ವಾಪಸ್ ಮರಳುತ್ತಿದ್ದಾರೆ. ಟೀ ಕೊಡುತ್ತಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ, ಹೊರಗಡೆಯಿಂದಲೇ ನೀರು ತರಬೇಕಾಗಿದೆ. ವೈದ್ಯರು ಸಕಾಲಕ್ಕೆ ಬಂದು ಚಿಕಿತ್ಸೆ ನೀಡುತ್ತಿಲ್ಲ ಎಂದು ಸೋಂಕಿತರ ಅಟೆಂಡರ್‌ಗಳು ಆರೋಪಿಸಿದ್ದಾರೆ.
ಕೋವಿಡ್ ರೋಗಿಗಳು ಇರುವ ವಾರ್ಡುಗಳಲ್ಲಿ ಸ್ವಚ್ಛತೆ ಇಲ್ಲ. ವಾರ್ಡ್‌ಗಳ ಶೌಚಾಲಯಗಳು ಗಬ್ಬುನಾರುತ್ತಿವೆ. ವಾರ್ಡಗಳಲ್ಲಿ ಸ್ವಚ್ಛ ಮಾಡಲು ಸಿಬ್ಬಂದಿ ಬರುತ್ತಿಲ್ಲ. ಹೀಗಾಗಿ ಸೋಂಕಿತರೇ ವಾರ್ಡ್ ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ. ರಿಮ್ಸ್‌ನಲ್ಲಿ ಕೋವಿಡ್ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ ಆರಂಭಿಸಲಾಗಿದೆ. ಆದರೆ ನಾವೇ ಸ್ವಚ್ಛ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸೋಂಕಿತರು ಅಳಲು ತೊಡಿಕೊಂಡಿದ್ದಾರೆ. ಇಲ್ಲಿಯ ಅವ್ಯವಸ್ಥೆಯ ಬಗ್ಗೆ ಸೋಂಕಿತರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇತ್ತೀಚಿಗೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಕೋವಿಡ್ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಇಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.