ನವದೆಹಲಿ: ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಿ ಅಸ್ಥಿರತೆ ಉಂಟುಮಾಡಲು ವಿರೋಧ ಪಕ್ಷಗಳು ವ್ಯವಸ್ಥಿತ ಪಿತೂರಿ ನಡೆಸುತ್ತಿವೆ ಎಂದು ಬಿಜೆಪಿರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೇಶದಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಗಂಭೀರ ಪರಿಸ್ಥಿತಿಯನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ. 140 ಕೋಟಿ ಭಾರತೀಯರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಾ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವಾಗ, ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಈ ಕೃತ್ಯದ ಹಿಂದೆ ಎರಡು ಅರಾಜಕ ಶಕ್ತಿಗಳಿವೆ. ಒಂದು ರಾಹುಲ್ ಗಾಂಧಿ ನೇತೃತ್ವದ ‘ಇಂಡಿ ಒಕ್ಕೂಟ’ವಾದರೆ, ಇನ್ನೊಂದು ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಿಗರ ಕಾಕ್ರೋಚ್ ಜನತಾ ಪಾರ್ಟಿ (CJP) ಎಂದು ನೇರವಾಗಿ ಆರೋಪಿಸಿದರು.
“ಈ ಎರಡೂ ಗುಂಪುಗಳ ಹುನ್ನಾರಗಳನ್ನು ಭಾರತದ ಜನತೆ ಸ್ಪಷ್ಟವಾಗಿ ಗುರುತಿಸಿದ್ದಾರೆ. ಯಾರು ಹೆಚ್ಚು ಅಸ್ಥಿರತೆ ಸೃಷ್ಟಿಸುತ್ತಾರೆ ಎಂದು ಇವರ ನಡುವೆ ‘ಅರಾಜಕತೆಯ ಸ್ಪರ್ಧೆ’ ನಡೆಯುತ್ತಿದೆ. ಜನರಿಂದ ಈಗಾಗಲೇ ತಿರಸ್ಕೃತಗೊಂಡಿರುವ ಈ ನಾಯಕರು, ಜನರ ತೀರ್ಪನ್ನು ಒಪ್ಪಿಕೊಳ್ಳುವ ಅಥವಾ ಅದರಿಂದ ಪಾಠ ಕಲಿಯುವ ಬದಲು, ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ದೇಶದಲ್ಲಿ ಅಶಾಂತಿ ಹಬ್ಬಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಇವರ ರಾಜಕೀಯ ದುರುದ್ದೇಶದ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ಎಚ್ಚರಿಸಿದರು.
ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ನಿರಂತರ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಈ ಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ ಅವರು, ಭಾರತ ಸ್ವಾವಲಂಬಿ ಹಾಗೂ ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದನ್ನು ನೋಡಲು ನಿಮಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ವಿದೇಶಿ ಶಕ್ತಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದೀರಿ. ಭಾರತದ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠವಾಗಿದೆ. ಈ ದೇಶದ ದೇಶಪ್ರೇಮಿ ಜನತೆ ಒಗ್ಗಟ್ಟಾಗಿ ನಿಮ್ಮ ಇಂತಹ ಕುತಂತ್ರಗಳನ್ನು ಬುಡಸಮೇತ ಹಿಮ್ಮೆಟ್ಟಿಸಲಿದ್ದಾರೆ ಎಂದು ಗುಡುಗಿದರು.
Laxmi News 24×7