ಹೈದರಾಬಾದ್: ಕೊರೊನಾ ಭೀತಿ ನಡುವೆಯೂ ಕನ್ನಡದ ನಟಿ ರಚಿತಾ ರಾಮ್ ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕೆಂದು ಹೈದಾರಾಬಾದ್‍ಗೆ ತೆರಳಿದ್ದಾರೆ.
ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ ಅನ್ನು ದಿನದಿಂದ ದಿನಕ್ಕೆ ಸಡಿಲಿಕೆ ಮಾಡುತ್ತಾ ಬರುತ್ತಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೆ ಇದೆ. ಇತ್ತೀಚೆಗಷ್ಟೇ ಸಿನಿಮಾ ಚಿತ್ರೀಕರಣಕ್ಕೂ ಸರ್ಕಾರ ಅನುಮತಿ ನೀಡಿದ್ದು, ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಕಲಾವಿದರು ಶೂಟಿಂಗ್‍ಗೆ ಹೋಗುತ್ತಿದ್ದಾರೆ.
ಸುಮಾರು ಮೂರು ತಿಂಗಳು ಚಿತ್ರದ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕುಳಿತಿದ್ದ ರಚಿತಾ, ಸರ್ಕಾರ ಅನುಮತಿ ಕೊಟ್ಟ ಕೂಡಲೇ ‘ಸೂಪರ್ ಮಚ್ಚಿ’ ಸಿನಿಮಾದ ಶೂಟಿಂಗ್‍ಗೆ ಆಗಮಿಸಿದ್ದಾರೆ. ಶೂಟಿಂಗ್ ಸೆಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಮಾಡುತ್ತಿರುವ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ.
ಈ ಸಿನಿಮಾ ರಚಿತಾ ರಾಮ್ ಅಭಿನಯದ ಮೊದಲ ಸಿನಿಮಾವಾಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕನಾಗಿ ನಟಿಸುತ್ತಿದ್ದಾರೆ. ಜೊತೆಗೆ ಈ ಸಿನಿಮಾಗೆ ಪುಲಿ ವಾಸು ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾದಲ್ಲಿ ರಚಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಲಾಕ್‍ಡೌನ್ ನಂತರ ಶೂಟಿಂಗ್ ನಿಲ್ಲಿಸಿತ್ತು. ಈಗ ಮತ್ತೆ ಆರಂಭಿಸಿದೆ.
‘ಸೂಪರ್ ಮಚ್ಚಿ’ ಸಿನಿಮಾದ ಶೂಟಿಂಗ್‍ಗಾಗಿ ಹೈದರಾಬಾದ್‍ಗೆ ಹೋಗಿರುವ ರಚಿತಾ, ಸರ್ಕಾರ ಹೇಳಿರುವ ನಿಯಮವನ್ನು ಪಾಲಿಸಿ ಮಾಸ್ಕ್, ಸಾನಿಟೈಜರ್, ಮತ್ತು ಕಡಿಮೆ ಸಿಬ್ಬಂದಿಯ ನೆರವಿನಿಂದ ಶೂಟಿಂಗ್ ಆರಂಭ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ನಬಾ ನಟೇಶ್ ನಂತರ ರಚಿತಾ ಕೂಡ ಮೊದಲ ಬಾರಿಗೆ ತೆಲಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ರಿಜ್ವಾನ್ ಅವರು ಬಂಡವಾಳ ಹೂಡಿದ್ದಾರೆ.
ಈ ಚಿತ್ರದ ಜೊತೆಗೆ ರಚಿತಾ ರಾಮ್ ಅವರು ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಚಿತಾ ಏಕ್‍ಲವ್‍ಯಾ, 100, ಡಾಲಿ, ಏಪ್ರಿಲ್, ಸೀರೆ, ಲಿಲ್ಲಿ, ಸಂಜು ಅಲಿಯಾಸ್ ಸಂಜಯ್ ಎಂಬ ಸಿನಿಮಾಗಳನ್ನು ಮಾಡುತ್ತಿದ್ದಾರೆ ರಚಿತಾ ಕೊನೆಯ ಬಾರಿ ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.