Breaking News

ದಲಿತರ ಹಣ ದಲಿತರಿಗೆ ಸೇರಬೇಕು – ವಿಪಕ್ಷ ನಾಯಕ ಆರ್‌. ಅಶೋಕ್‌ ಒತ್ತಾಯ

Spread the love

ಬೆಂಗಳೂರು: ನಾವು ದಲಿತ ವಿರೋಧಿಗಳಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ. ಸರ್ಕಾರ ಲೂಟಿ ಮಾಡಿರುವ ದಲಿತರ ಹಣ ದಲಿತರಿಗೇ ಸೇರಬೇಕು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಒತ್ತಾಯಿಸಿದ್ದಾರೆ.

ವಿಧಾನಸೌಧದ ಕೆಂಗಲ್‌ ಗೇಟ್‌ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ವಿರುದ್ಧ ಹಲವು ಪ್ರಕರಣಗಳು ಮತ್ತು ಲೋಕಾಯುಕ್ತ ತನಿಖೆಯ ಉಲ್ಲೇಖ ಮಾಡಿರುವ ಆರ್. ಅಶೋಕ್, ನಾಗೇಂದ್ರ ಒಬ್ಬರಿಗಾಗಿ ದಲಿತ ಸಮುದಾಯದ ಹಣ ಲೂಟಿ ಮಾಡಲಾಗಿದೆ. ದಾಖಲೆಗಳು ಮತ್ತು ಚಾರ್ಜ್‌ಶೀಟ್‌ನಲ್ಲಿ ಪ್ರಕರಣದ ವಿವರಗಳಿವೆ. ಹಾಗಿದ್ದರೂ ರಾಜೀನಾಮೆ ಏಕೆ ಕೊಡಿಸಿಲ್ಲ? ಇವರು ಕಾಂಗ್ರೆಸ್ ಹೈಕಮಾಂಡ್‌ಗೆ ದುಡ್ಡು ಕೊಟ್ಟಿದ್ದಾರಾ? ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಅವರ ಬದಲಿಗೆ ಬೇರೆ ದಲಿತ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ದಲಿತ ವಿರೋಧಿ ಎಂದು ಯಾವ ಮುಖದಿಂದ ಹೇಳುತ್ತೀರಿ?
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣವನ್ನ ಉಲ್ಲೇಖಿಸಿದ ಆರ್. ಅಶೋಕ್, ಚಂದ್ರಶೇಖರ್ ಬರೆದ ಪತ್ರದಲ್ಲಿ ʻಸಚಿವರ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಿದ್ದೇವೆʼ ಎಂಬ ಉಲ್ಲೇಖವಿದೆ. ಚಂದ್ರಶೇಖರ್ ಕುಟುಂಬಕ್ಕೆ ಉದ್ಯೋಗವಿಲ್ಲದ ಪರಿಸ್ಥಿತಿ ಇದ್ದರೂ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತರ ಹಣ ಕಳ್ಳತನವಾಗಿದ್ದರೆ ಬಿಜೆಪಿ ದಲಿತ ವಿರೋಧಿ ಎಂದು ಯಾವ ಮುಖದಿಂದ ಹೇಳುತ್ತೀರಿ? ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಹೋರಾಟ ಮುಂದುವರಿಯಲಿದೆ
ನಾವು ದಲಿತ ವಿರೋಧಿಗಳಲ್ಲ. ದಲಿತರ ಹಣ ದಲಿತರಿಗೆ ಸೇರಬೇಕು ಎಂದು ಸ್ಪಷ್ಟಪಡಿಸಿದ ಆರ್. ಅಶೋಕ್, ವಾಲ್ಮೀಕಿ ಪ್ರತಿಮೆಯಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ಆರಂಭಿಸುವುದಾಗಿ ಹೇಳಿದ್ದಾರೆ.

ಬರ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ
ರಾಜ್ಯದಲ್ಲಿ ಕುಡಿಯುವ ನೀರಿಗೆ ಆಹಾಕಾರವಿದ್ದು, ಜಾನುವಾರುಗಳಿಗೆ ಮೇವು ಒದಗಿಸುವ ಅಗತ್ಯವಿದೆ. ಆದಾಗ್ಯೂ ಬರದ ಬಗ್ಗೆ ಚರ್ಚೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಬರ ಇದೆ ಎಂದು ಸರ್ಕಾರವೇ ಘೋಷಿಸಿಲ್ಲ. ಬರಕ್ಕೆ ಕನಿಷ್ಠ 10 ಸಾವಿರ ಕೋಟಿ ರೂ. ಪರಿಹಾರ ಘೋಷಿಸಬೇಕು. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿವೇಶನದಲ್ಲಿ ಬರದ ಕುರಿತು ಚರ್ಚೆಗೆ ಅವಕಾಶ ನೀಡದೆ ಸರ್ಕಾರವು ಶಾಸಕರ ಹಕ್ಕನ್ನು ಕಸಿದುಕೊಂಡಿದೆ. 224 ಶಾಸಕರ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ಪ್ಯಾಕ್‌ ಮಾಡದ ಖಾದ್ಯ ತೈಲ ಮಾರಾಟಕ್ಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ 7 ವರ್ಷ ಜೈಲು

Spread the loveಮುಂಬೈ: ಮಹಾರಾಷ್ಟ್ರದಲ್ಲಿ ಸಡಿಲ (ಪ್ಯಾಕ್ ಮಾಡದ) ಖಾದ್ಯ ತೈಲ ಮಾರಾಟ ಮಾಡುವುದನ್ನು ರಾಜ್ಯ ಆಹಾರ ಮತ್ತು ಔಷಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ