ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕಾವೇರಿ ಕೊಳ್ಳದ (ಜಲಾಶಯಗಳು ವೇಗವಾಗಿ ಬರಿದಾಗುತ್ತಿವೆ.
ಮಳೆ ಸಂಪೂರ್ಣ ಕೈಕೊಟ್ಟಿರುವ ನಡುವೆಯೂ ಹೊರಹರಿವು ದಿನೇ ದಿನೆ ಏರಿಕೆಯಾಗುತ್ತಿರುವುದು ಈ ಭಾಗದ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಹರಿಸಬೇಕಾದ ಬಹುಪಾಲು ನೀರನ್ನು ಕೆಆರ್‌ಎಸ್ ಡ್ಯಾಂನಿಂದಲೇ ಬಿಡಲಾಗುತ್ತಿದೆ. ಪ್ರಸ್ತುತ ಕೆಆರ್‌ಎಸ್‌ನಿಂದ ನದಿಗೆ 9 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ ಮಾಡಲಾಗುತ್ತಿದೆ.
ಈ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿರುವುದರಿಂದ 3 ದಿನದಲ್ಲಿ 3 ಅಡಿ ಕುಸಿತ ಕಂಡಿದೆ. 111 ಅಡಿಯಷ್ಟಿದ್ದ ನೀರಿನ ಮಟ್ಟ ಇದೀಗ 108 ಅಡಿಗೆ ಇಳಿಕೆಯಾಗಿದೆ. ಸದ್ಯ ಹೇಮಾವತಿ ಜಲಾಶಯದಿಂದ ಬಿಡಲಾಗಿರುವ ನೀರಷ್ಟೇ ಕೆಆರ್‌ಎಸ್‌ಗೆ ಆಸರೆಯಾಗಿ ಹರಿದು ಬರುತ್ತಿದೆ. ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿರುವುದರಿಂದ ಕೆಆರ್‌ಎಸ್ ಮಾತ್ರವಲ್ಲದೆ ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲೂ ನೀರಿನ ಪ್ರಮಾಣ ತೀವ್ರವಾಗಿ ಇಳಿಕೆಯಾಗುತ್ತಿದೆ.
ಮಳೆ ಬಾರದಿದ್ದರೆ ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಮಾತ್ರವಲ್ಲದೆ, ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಭೀತಿ ಸೃಷ್ಟಿಯಾಗಿದೆ
Laxmi News 24×7