Breaking News

ಅಡ್ಡಂಡ ಕಾರ್ಯಪ್ಪ ಪತ್ರಿಕಾಗೋಷ್ಠಿ ವೇಳೆ ಗಲಾಟೆ – ಚಪ್ಪಲಿ ಎಸೆತ, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

Spread the love

ಬೆಂಗಳೂರು: ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಗಲಾಟೆ ನಡೆದಿದ್ದು, ನಾಟಕಕಾರ ಅಡ್ಡಂಡ ಕಾರ್ಯಪ್ಪ  ಅವರತ್ತ ಕಾಂಗ್ರೆಸ್  ಕಾರ್ಯಕರ್ತರು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಗಾಂಧಿ ಹತ್ಯೆಯ ಸತ್ಯ’ ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಪಿಸಿಸಿ ಮುಖಂಡರಾದ ಲಕ್ಷ್ಮಣ್ ಮತ್ತು ಮನೋಹರ್ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರ್ಯಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಚೇಲಾ, ಬ್ಲ್ಯಾಕ್ ಟಿಕೆಟ್ ಗಿರಾಕಿ ಎಂದು ಕಾರ್ಯಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಚಪ್ಪಲಿಯಿಂದ ಹೊಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರು ಕಾರ್ಯಪ್ಪ ಅವರತ್ತ ಚಪ್ಪಲಿ ಎಸೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಈ ಘಟನೆ ಕುರಿತು ಮಾತನಾಡಿದ ಅಡ್ಡಂಡ ಕಾರ್ಯಪ್ಪ, ಇದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ‍್ಯವಾಗಿದ್ದು, ಚರಿತ್ರೆಯಲ್ಲಿ ಮತ್ತು ಪುಸ್ತಕಗಳಲ್ಲಿ ಇರುವ ವಿಚಾರಗಳನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಿದ್ದೇನೆ. ದೇಶದ ಬಗ್ಗೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಮಾತನಾಡಲು ನಾಟಕ ಮಾಡಿದ್ದೇನೆ. ನಾಟಕದ ಬಗ್ಗೆ ಈಗಾಗಲೇ ಪುಸ್ತಕವನ್ನೂ ಪ್ರಕಟಿಸಿದ್ದೇನೆ. ನಾಥುರಾಮ್ ಗೋಡ್ಸೆ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಹಾಗೂ ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ವಿಚಾರಗಳನ್ನು ನಾಟಕದಲ್ಲಿ ತೋರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮೊನ್ನೆ ಸುಚಿತ್ರಾ ಅಕಾಡೆಮಿಯಲ್ಲಿ ನಾಟಕ ಪ್ರದರ್ಶನದ ವೇಳೆ 12ರಿಂದ 13 ಮಂದಿ ಬಂದು ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೇಲೆಯೂ ಇಂಕ್ ಎರಚಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಮ್ಮೆ ನಾಟಕ ಪ್ರದರ್ಶನ ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಈಗಾಗಲೇ ಒಂಬತ್ತು ನಾಟಕ ಪ್ರದರ್ಶನಗಳು ನಡೆದಿವೆ. ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಪ್ರದರ್ಶನಕ್ಕೆ ಅವಕಾಶವಿತ್ತು. ಆದರೆ, ಮೊದಲ ದಿನದ ಪ್ರದರ್ಶನದಂದೇ ನನ್ನ ಮೇಲೆ ಹಲ್ಲೆ ನಡೆದಿದೆ. ಎರಡನೇ ದಿನವೂ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದು, ಪೊಲೀಸರ ಬಿಗಿ ಭದ್ರತೆಯಲ್ಲಿ ನಾಟಕ ನಡೆಸಲಾಗಿದೆ ಎಂದು ಹೇಳಿದರು.

ನಾಟಕದಲ್ಲಿ `ಕಾಂಗ್ರೆಸ್’ ಎಂಬ ಪದ ಬರಬಾರದು ಎಂಬುದು ಕೆಲವರ ಆಕ್ಷೇಪವಾಗಿದೆ. ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅಂಶಗಳು ಅವರನ್ನು ಕೆರಳಿಸಿವೆ. ಗೂಂಡಾಗಿರಿ ಮಾಡುವ ಬದಲು ಕಾನೂನಿನ ಮೂಲಕ ಹೋರಾಟ ಮಾಡಲಿ. ನನಗೆ ಸಿಕ್ಕಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.

ಪತ್ರಿಕಾಗೋಷ್ಠಿ ವೇಳೆ ಗಲಾಟೆ ನಡೆದ ಹಿನ್ನೆಲೆ ಪೊಲೀಸರು ಅಡ್ಡಂಡ ಕಾರ್ಯಪ್ಪ ಅವರಿಗೆ ಬಿಗಿ ಭದ್ರತೆ ಒದಗಿಸಿದರು. ಬಳಿಕ ಅವರನ್ನು ಕಾರಿನಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.


Spread the love

About Laxminews 24x7

Check Also

ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ

Spread the loveಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್‌ ಬಂದಿದೆ. ಬೆಂಗಳೂರು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ