ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಹೇಮಾವತಿ ಸೋನೊಳಿ ಅವರಿಗೆ ನಿರ್ಗಮಿತ ಅಧ್ಯಕ್ಷೆ ಜ್ಯೋತಿ ಬದಾಮಿ ಅಧಿಕಾರ ಹಸ್ತಾಂತರಿಸಿದರು.
‘ತಮ್ಮ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ಕುಪ್ಪಳ್ಳಿ ಹಾಗೂ ನಿಡಸೋಸಿಯ ಶ್ರೀಮಠದ ಸಾಹಿತ್ಯ ಚಿಂತನ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ಜನಪ್ರಿಯತೆ ಗಳಿಸಿತು’ ಎಂದು ಜ್ಯೋತಿ ತಿಳಿಸಿದರು.
ಉಡುಪಿಯ ಉಪನ್ಯಾಸಕಿ ಸಂಧ್ಯಾ ಶೆಣೈ, ’20 ವರ್ಷಗಳ ಗಟ್ಟಿ ಹೆಜ್ಜೆಗುರುತು ಮೂಡಿಸುತ್ತಾ ಹಿರಿಯ ಕಿರಿಯ ಸಾಹಿತಿಗಳಿಗೆ ವೇದಿಕೆ ಒದಗಿಸಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ವಾರಸುದಾರರಿಗೆ ಮಾರ್ಗದರ್ಶನ ನೀಡುತ್ತಿರುವ ಲೇಖಕಿಯರ ಸಂಘ ಉತ್ತರೋತ್ತರವಾಗಿ ಬೆಳೆಯಲಿ’ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ‘ಸಂಘವು ಸಾಹಿತ್ಯದ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಚಟುವಟಿಕೆಗಳನ್ನು ಕೂಡ ಮಾಡಿದೆ. ನಿರ್ಗಮಿತ ಅಧ್ಯಕ್ಷರ ಅವಧಿಯಲ್ಲಿ 18 ಕೃತಿಗಳು ಬಿಡುಗಡೆಯಾಗಿದ್ದು ಹೆಗ್ಗಳಿಕೆಯಾಗಿದೆ. ಪ್ರವಾಹ ಸಂತ್ರಸ್ತರಿಗೆ ₹50ಸಾವಿರ ನೆರವು ನೀಡಿದ್ದಾರೆ. ಡಯಾಲಿಸಿಸ್ ರೋಗಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿರುವುದು ಶ್ಲಾಘನೀಯ’ ಎಂದರು.
ಶೈಲಜಾ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಸುನಂದಾ ಮುಳೆ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ಯಮಕನಮರಡಿ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ರಾಜನಂದಾ ಘಾರ್ಗಿ ಹಣಕಾಸು ವಿವರ ನೀಡಿದರು. ಲಲಿತಾ ಕ್ಯಾಸಣ್ಣವರ ವಂದಿಸಿದರು.