ಬೆಂಗಳೂರು, ಮೇ 26- ರಾಜ್ಯದ ಒಳನಾಡಿನಲ್ಲಿ ಇನ್ನೊಂದು ವಾರದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆ ಗಳಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ.
ನೈರುತ್ಯ ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಒಂದು ವಾರ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.
ರಾಜ್ಯದಲ್ಲಿ ಚದುರಿದಂತೆ ಕೆಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಮುಂದುವರೆದಿದೆ. ಏಕಕಾಲಕ್ಕೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಇನ್ನೊಂದು ವಾರ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ವಾಯುಭಾರ ಕುಸಿತ ವಾಗಿ ಮಾರ್ಪಾಡಾಗುವ ಸಂಭವ ಹೆಚ್ಚಾಗಿದೆ. ಆದರೆ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ವಾಯುಭಾರ ಕುಸಿತವಾಗುವ ಸಾಧ್ಯತೆ ವಿರಳ.
ಆದರೂ ಎರಡೂ ಕಡೆಯೂ ಸುಳಿಗಾಳಿ ಇರುವುದರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲಾಗಳು, ಮಲೆನಾಡು ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದೆ ಎಂದರು.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ಭೀಕರ ಚಂಡಮಾರುತದಿಂದಾಗಿ ವಾತಾ ವರಣದಲ್ಲಿ ತೇವಾಂಶದ ಕೊರತೆ ಉಂಟಾಗಿ ಮುಂಗಾರು ವಿಳಂಬವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಮೇಲ್ಮೈ ಸುಳಿಗಾಳಿ ಉಂಟಾಗಿ ರುವುದರಿಂದ ಇನ್ನೆರಡು ದಿನದಲ್ಲಿ ಮುಂಗಾರು ವಿಳಂಬವೇ ಇಲ್ಲವೇ ಜೂನ್ ಮೊದಲ ವಾರದಲ್ಲಿ ವಾಡಿಕೆಯಂತೆ ಆರಂಭವಾಗಲಿದೆಯೇ ಎಂಬುದು ಗೊತ್ತಾಗಲಿದೆ.
ಸ್ಥಳೀಯ ಹವಾ ಮುನ್ಸೂಚನೆ ಪ್ರಕಾರ ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಇನ್ನೂ ಎರಡು ದಿನ ಉತ್ತಮ ಮಳೆಯಾಗಲಿದೆ ಎಂದು ಹೇಳಿದರು