ಬೆಂಗಳೂರು: ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ, ಶತ್ರುಗಳ ವಿರುದ್ಧ ಹೋರಾಟದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಮಾಜಿ ಯೋಧರೊಬ್ಬರು ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಶಿವಾನಂದ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿರುವ ಮಾಜಿ ಯೋಧ. ಶಿವಾನಂದ ರೆಡ್ಡಿ ಎಂಎಲ್ಐ-ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದರು. ಯುದ್ಧದ ಸಂದರ್ಭದಲ್ಲಿ ಕಾಲಿಗೆ ಗಾಯಗೊಂಡಿದ್ದ ಶಿವಾನಂದ ರೆಡ್ಡಿ ನಿವೃತ್ತಿಯ ಬಳಿಕ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಳ್ಳಲು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು.
ನಿವೃತ್ತ ಯೋಧರಿಗೆ ಸರ್ಕಾರದ ನಿಯಮಗಳ ಪ್ರಕಾರ ಜಮೀನು ಮಂಜೂರು ಮಾಡಬೇಕಿದ್ದರೂ, ತಮ್ಮ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಶಿವಾನಂದ ರೆಡ್ಡಿ ಅಸಮಾಧಾನಗೊಂಡಿದ್ದರು. ಜಮೀನು ಮಂಜೂರಿಗಾಗಿ ಶಿವಾನಂದ ರೆಡ್ಡಿ ಈ ಹಿಂದೆ ಉಪವಾಸ ಸತ್ಯಾಗ್ರಹ ಕೂಡ ನಡೆಸಿದ್ದರು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು.
ಇದೀಗ ಇದೇ ವಿಚಾರಕ್ಕೆ ಬೇಸತ್ತು ಶಿವಾನಂದ ರೆಡ್ಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ ಬಳಿಕ ಅಸ್ವಸ್ಥಗೊಂಡ ಅವರನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರಿಂದ ಅವಮಾನ ಆರೋಪ:
ಆಗಸ್ಟ್ 22ರಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಚಿಂತಾಮಣಿಗೆ ಆಗಮಿಸಿದ್ದ ವೇಳೆ ಅವರನ್ನು ಭೇಟಿಯಾಗಲು ಶಿವಾನಂದ ರೆಡ್ಡಿ ಮುಂದಾಗಿದ್ದರು. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಶಿವಾನಂದ ರೆಡ್ಡಿಗೆ ಡಿಸಿಎಂ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿ ನಿಂದಿಸಲಾಗಿದೆ. ಪೊಲೀಸರು ಮಾಜಿ ಯೋಧ ಶಿವಾನಂದ ರೆಡ್ಡಿಯವರನ್ನು ಏಕವಚನದಲ್ಲಿ ಮಾತನಾಡಿಸಿ ಅವಮಾನಿಸಿದ್ದಾರೆ ಎಂದು ಅವರ ಪತ್ನಿ ಕಾಂತಮ್ಮ ಗಂಭೀರ ಆರೋಪ ಮಾಡಿದ್ದಾರೆ.ಸರ್ಕಾರದ ನಿರ್ಲಕ್ಷ್ಯ ಹಾಗೂ ಪೊಲೀಸರಿಂದ ಆದ ಅವಮಾನದಿಂದಲೇ ಶಿವಾನಂದ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪತ್ನಿ ಕಾಂತಮ್ಮ ಆರೋಪಿಸಿದ್ದಾರೆ.
Laxmi News 24×7