ಮೈಸೂರು: ನಗರದಲ್ಲಿ ಚಿನ್ನತಂಬಿ ಚಿನ್ನ ವಂಚನೆ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಗೋಲ್ಡ್ ಸ್ಕ್ಯಾಮ್ ನಡೆದಿದೆ. ಚಿನ್ನದ ಅಂಗಡಿ ಮಾಲೀಕ ಜನರಿಗೆ ಚಿನ್ನ ಕೊಡುವುದಾಗಿ ಮಾಸಿಕ ಕಂತು ಕಟ್ಟಿಸಿಕೊಂಡು ಉಂಡೆನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ
80 ಕ್ಕೂ ಹೆಚ್ಚು ಜನ ಚಿನ್ನದ ಆಸೆಗೆ ಮಾಸಿಕ ಕಂತು ಕಟ್ಟಿ ಈಗ ಹಣ ಕಳೆದುಕೊಂಡಿದ್ದಾರೆ. ಮೋಹನ್ ಜ್ಯುವೆಲರಿ ಹೆಸರಿನ ಚಿನ್ನದಂಗಡಿಯಲ್ಲಿ ಈ ವಂಚನೆ ನಡೆದಿದೆ. ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿನ ಮೋಹನ್ ಜ್ಯುವೆಲರಿ ಮಾಲೀಕ ಮೋಹನ್ ಲಾಲ್ ಕಳೆದ 2 ಆವೃತ್ತಿಯಲ್ಲಿ ಜನರಿಂದ ಹಣ ಕಟ್ಟಿಸಿಕೊಂಡು ಚಿನ್ನ ನೀಡಿ ನಂಬಿಕೆ ಸಂಪಾದನೆ ಮಾಡಿದ್ದ.
ಈ ಬಾರಿ ಚಿನ್ನದಾಸೆಗೆ ಹೆಚ್ಚಿನ ಜನ ಮತ್ತಷ್ಟು ಹಣ ಹೂಡಿಕೆ ಮಾಡಿದ್ದರು. ಕಳೆದ ಒಂದು ವಾರದಿಂದ ಮೋಹನ್ ಲಾಲ್, ಜ್ಯುವೆಲರಿ ಶಾಪ್ ಬಂದ್ ಆಗಿದ್ದು, ಮನೆಯೂ ಖಾಲಿ ಮಾಡಿಕೊಂಡು ರಾತ್ರೋರಾತ್ರಿ ಊರು ಬಿಟ್ಟಿದ್ದಾನೆ.
ಈತನಿಂದ ವಂಚನೆಗೆ ಒಳಗಾದ ಜನರು ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಜ್ಯುವೆಲರಿ ಮಾಲೀಕ ಮೋಹನ್ ಲಾಲ್ನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Laxmi News 24×7