ಬೆಳಗಾವಿ:ನಮ್ಮ ರಕ್ತ ಮತ್ತೊಬ್ಬರ ಬದುಕಿಗೆ ಬೆಳಕಾಗಲಿ ಎಂಬ ಮಾನವೀಯ ಸಂದೇಶದೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ನಡೆದ ಬೃಹತ ಸ್ವಯಂಪ್ರೇರಿತ ರಕ್ತದಾನ ಅಭಿಯಾನಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಶಿಕ್ಷಕರ ದಿನ ಅಂಗವಾಗಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಈ ವಿಶಿಷ್ಟ ಅಭಿಯಾನದಲ್ಲಿ ಜಿಲ್ಲೆಯ 23 ಕೇಂದ್ರಗಳಲ್ಲಿ ಏಕಕಾಲಕ್ಕೆ ರಕ್ತದಾನ ಶಿಬಿರಗಳು ನಡೆದವು. ಒಂದೇ ದಿನದಲ್ಲಿ 9,123 ಮಂದಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು 4,634 ಯುನಿಟ್ ರಕ್ತವನ್ನು ದಾನ ಮಾಡಿದರು.ಇದು ಕೇವಲ ರಕ್ತ ಸಂಗ್ರಹದ ಸಂಖ್ಯೆಯಲ್ಲ ಸಮಾಜದ ವಿವಿಧ ವರ್ಗಗಳು ಒಂದಾಗಿ ನಿಂತು ಮಾನವೀಯತೆಗೆ ನೀಡಿದ ದೊಡ್ಡ ಕೊಡುಗೆ.
ರಕ್ತದಾನಕ್ಕೆ ಜನಸ್ಪಂದನೆಯ ಮಹಾಪೂರ:ಸರ್ಕಾರಿ ನೌಕರರು, ವಿವಿಧ ಇಲಾಖೆಗಳ ಸಿಬ್ಬಂದಿ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯಾವುದೇ ಒತ್ತಾಯವಿಲ್ಲದೆ ಸ್ವಯಂಪ್ರೇರಿತರಾಗಿ ಶಿಬಿರಗಳಿಗೆ ಆಗಮಿಸಿ ರಕ್ತದಾನ ಮಾಡಿದರು.ಅದರಲ್ಲೂ ವಿಶೇಷವಾಗಿ ವಿಶೇಷಚೇತನರು, ಪೌರಕಾರ್ಮಿಕರು ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು ರಕ್ತದಾನಕ್ಕೆ ಮುಂದಾಗಿದ್ದು, ಸಾಮಾಜಿಕ ಹೊಣೆಗಾರಿಕೆಗೆ ಹೊಸ ಅರ್ಥ ನೀಡಿತು.ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳ ನಡುವೆಯೂ ಸಮಾಜದ ಮತ್ತೊಬ್ಬರ ಜೀವ ಉಳಿಸಲು ಸಮಯ ಮೀಸಲಿಟ್ಟ ಈ ವರ್ಗಗಳ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ರಕ್ತದಾನ ಕೇವಲ ದಾನವಲ್ಲ, ಜೀವದಾನ
ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಚಾಲನೆ ನೀಡಿ ಮಾತನಾಡಿ, ರಕ್ತದಾನವು ಕೇವಲ ದಾನ ಮಾಡುವ ಕಾರ್ಯವಲ್ಲ; ಅಗತ್ಯವಿರುವ ವ್ಯಕ್ತಿಯ ಜೀವಕ್ಕೆ ನೀಡುವ ಅಮೂಲ್ಯ ಕೊಡುಗೆ.ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಾಧ್ಯವಾದಾಗ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ, ಡಿಸಿಎಫ್ ಎನ್.ಇ. ಕ್ರಾಂತಿ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಡಾ. ಚಾಂದನಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7