ಅಥಣಿ: ‘ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದಾಗ ಒಂದೊಂದು ಸಲ ಒಂದೊಂದು ರೀತಿಯ ಫಲಿತಾಂಶವನ್ನು ಆರೋಗ್ಯ ಇಲಾಖೆಯವರು ನೀಡುತ್ತಿದ್ದಾರೆ. ಒಮ್ಮೆ ಪಾಸಿಟಿವ್ ನೀಡಿದರೆ, ಮರುದಿನವೇ ನೆಗೆಟಿವ್ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರುತ್ತಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು ಲೂಟಿ ಹೊಡೆಯಲು ಹೀಗೆ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಹಿಪ್ಪರಗಿ ಗಲ್ಲಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೇ ತಿಂಗಳು 15ರಂದು ಅಥಣಿಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದೆ. ವರದಿ ಬರುವುದು ಬಾಕಿ ಇತ್ತು. ಮರುದಿನ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಹೋಗಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತು. ಆದರೆ, ಅಥಣಿಯಲ್ಲಿ ಮಾಡಿಸಿದ್ದ ವರದಿ ಶನಿವಾರ ಬಂದಿದ್ದು, ಇದರಲ್ಲಿ ಪಾಸಿಟಿವ್ ಇದೆ.
ಇದು ಹೇಗೆ ಸಾಧ್ಯ? ಮೊದಲು ಪರೀಕ್ಷೆ ಮಾಡಿಸಿದ್ದಾಗ ಸೋಂಕು ಇದ್ದಿದ್ದರೆ, ಎರಡನೇ ಬಾರಿ ಮಾಡಿಸಿದ್ದಾಗಲೂ ಪಾಸಿಟಿವ್ ಬರಬೇಕಾಗಿತ್ತು. ಆದರೆ, ನೆಗೆಟಿವ್ ಬಂದಿದ್ದು ಹೇಗೆ’ ಎಂದು ಪ್ರಶ್ನಿಸಿದರು.
‘ಇದು ಆರೋಗ್ಯ ಇಲಾಖೆಯವರ ನಿರ್ಲಕ್ಷ್ಯವೋ ಅಥವಾ ಕೇಂದ್ರ ಸರ್ಕಾರದ ದುಡ್ಡು ಹೊಡೆಯುವ ಕುತಂತ್ರವೋ ಗೊತ್ತಾಗುತ್ತಿಲ್ಲ. ಇದರಿಂದಾಗಿ ನನಗೆ ಹಾಗೂ ನನ್ನ ಕುಟುಂಬದವರಿಗೆ ಮಾನಸಿಕವಾಗಿ ಹಿಂಸೆಯಾಗಿದೆ’ ಎಂದು ಅಳಲು ತೋಡಿಕೊಂಡರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಎಸ್.ವಿ. ಮುನ್ಯಾಳ ಸಂಪರ್ಕಕ್ಕೆ ಸಿಗಲಿಲ್ಲ.
ವೈದ್ಯಾಧಿಕಾರಿ ತರಾಟೆ: ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಥಣಿ- ಕಾಗವಾಡ ತಾಲ್ಲೂಕಿನ 171 ಜನರ ಹೆಸರಿದ್ದು, ಅವುಗಳಲ್ಲಿ ಕೆಲವು ವ್ಯಕ್ತಿಗಳ ಹೆಸರುಗಳು ಎರಡೆರಡು ಬಾರಿ ನಮೂದಾಗಿದ್ದು ಕಂಡುಬಂದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ತಾಲ್ಲೂಕು ಆಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಿಯಲ್ಲಿ ಇತ್ತೀಚೆಗೆ ನಿಧನರಾದವರ ಹೆಸರುಗಳು ಕೂಡ ಇವೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??