ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಂಡನೆಯ ಅನಿವಾರ್ಯತೆ ಎದುರಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ “ಸಂಪನ್ಮೂಲವೇ ಸವಾಲ್’ ಆಗಿ ಪರಿಣಮಿಸಿದೆ. ಕೇಂದ್ರದಿಂದ ಲಭಿಸಬಹುದೆಂಬ ತೆರಿಗೆ ಪಾಲನ್ನು ಆಧರಿಸಿ “ಪರಪುಟ್ಟ ಬಜೆಟ್’ ರೂಪಿಸುವ ಸಾಧ್ಯತೆ ಇದೆ.
ಆದರೆ ಸಂಪನ್ಮೂಲ ಸಂಗ್ರಹಣೆಯ ಸಾಂಪ್ರದಾಯಿಕ ಬಾಬ್ತುಗಳ ಮೇಲೆ ಹೆಚ್ಚಿನ ಹೊರೆ ಹೇರುವಂತಿಲ್ಲ. ಕರದಾತರ ಮೇಲೆ ಅತೀ ಕರುಣೆ ಬೀರಿದರೆ ಸಂಪನ್ಮೂಲ ಸಂಗ್ರಹಣೆ ಹಗ್ಗದ ಮೇಲಿನ ನಡಿಗೆ ಆಗಲಿದೆ. ಹೀಗಾಗಿ ಅಬಕಾರಿ ಆದಾಯ ಹೆಚ್ಚಳವನ್ನೇ ನಂಬಿಕೊಳ್ಳುವಂತಾಗಿದೆ.
ಕೋವಿಡ್ ಹಾಗೂ ಆ ಬಳಿಕದ ದಿನಗಳಲ್ಲೂ ಅಬಕಾರಿ ಆದಾಯ ಮಾತ್ರ ಸ್ಥಿರವಾಗಿದ್ದು, ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲೇ ಶೇ.8ರ ಪ್ರಗತಿಯ ದರದಲ್ಲಿ 14 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುದ್ರಾಂಕ, ನೋಂದಣಿ, ಸಾರಿಗೆ ಹಾಗೂ ವಾಣಿಜ್ಯ ತೆರಿಗೆ ನಿಗದಿತ ಗುರಿ ತಲುಪುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹವೂ ಉತ್ತಮವಾಗಿದ್ದು , ಮಹಾರಾಷ್ಟ್ರದ ಅನಂತರದ ಸ್ಥಾನದಲ್ಲಿದೆ. ಆದರೆ ಜಿಎಸ್‌ಟಿ ಹಂಚಿಕೆ ಸರಿಯಾಗಿ ಆಗುತ್ತಿಲ್ಲ ಎಂಬ ಮಾತಿದೆ. ಈ ಮಧ್ಯೆ, ಸದನದಲ್ಲಿ ಮಂಡನೆಯಾಗಿರುವ ಆರ್ಥಿಕ ಮಧ್ಯ ವಾರ್ಷಿಕ ವರದಿ ಪ್ರಕಾರ ಈ ಸಾಲಿನ ತೆರಿಗೆ ಸಂಗ್ರಹದಲ್ಲಿ ಶೇ.10ರಷ್ಟು ಹೆಚ್ಚಳ ಆಗಿದೆ. ಆದರೆ ಬದ್ಧತಾ ವೆಚ್ಚದ ಹೆಚ್ಚಳ, ಜಿಎಸ್‌ಟಿ ಪರಿಹಾರದ ಕಡಿತ, ಸಾಲ ಮರುಪಾವತಿಯ ಪ್ರಮಾಣವೂ ಏರಿಕೆ ಯಾಗಿರುವುದು ಚಿಂತೆಗೆ ಕಾರಣವಾಗಿದೆ.