ಹಾವೇರಿ : ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡಲು ಹಿಂಜರಿಯುವ ಸ್ಥಿತಿ ಆತಂಕಕಾರಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡತನವನ್ನು ಎಂದಿಗೂ ಬಿಟ್ಟುಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಅವರು ಮಾತನಾಡಿ,
ಕನ್ನಡದ ನೆಲ, ಜಲ, ಗಡಿ ವಿಚಾರದಲ್ಲಿ ಸರ್ಕಾರ ಎಂದೂ ಉದಾಸೀನ ಮಾಡುವುದಿಲ್ಲ. ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ. ಕನ್ನಡಿಗರು ವಿಶಾಲ ಹೃದಯದವರು. ಹಿಂದೆ ಸಂಸ್ಕಾರ ಇತ್ತು, ಶಿಕ್ಷಣ ಇರಲಿಲ್ಲ. ಇಂದು ಶಿಕ್ಷಣ ಇದೆ; ಸಂಸ್ಕಾರ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಇದಕ್ಕೆ ಕನ್ನಡಿಗರು ಅವಕಾಶ ನೀಡಬಾರದು ಎಂದರು.
ಅಖಂಡ ಕಲ್ಪನೆ ಮರೆತ ನೆರೆ ಪ್ರಾಂತ್ಯ, ಕನ್ನಡಿಗರಲ್ಲಿ ಇಂಗ್ಲೀಷ ವ್ಯಾಮೋಹ:
ನೆರೆಯ ಪ್ರಾಂತದವರು ಅಖಂಡ ಭಾರತದ ಕಲ್ಪನೆ ಮರೆತು ವರ್ತನೆ ಮಾಡುತ್ತಿರುವುದು ಹಾಗೂ ಕನ್ನಡಿಗರಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚುತ್ತಿರುವುದು ಕನ್ನಡಿಗರಿಗೆ ಇರುವ ಬಹುದೊಡ್ಡ ಕುತ್ತುಗಳು ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ನೆರೆಯ ಪ್ರಾಂತ ಎಂದು ಪರೋಕ್ಷವಾಗಿ ಮಹಾರಾಷ್ಟ್ರ ರಾಜ್ಯವು ಕರ್ನಾಟಕದ ಪ್ರಾಂತಗಳನ್ನು ಕೇಳುತ್ತಿರುವುದು ತೀವ್ರ ಬಿಕ್ಕಟ್ಟಿನ ವಿಷಯ ಎಂದರು. ಅಲ್ಲದೇ, ಕರ್ನಾಟಕದಲ್ಲಿ ಕನ್ನಡದ ಶಾಲೆಗಳು ದಿನೇದಿನೇ ಕಡಿಮೆಯಾಗುತ್ತಿವೆ. ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದೆ. ಇವೆರೆಡು ಸಂಗತಿಗಳು ಕನ್ನಡಕ್ಕೆ ಬಹುದೊಡ್ಡ ಕುತ್ತುಗಳಾದರೂ ಕರ್ನಾಟಕ ಹಾಗೂ ಕನ್ನಡದ ಒಟ್ಟಾರೆ ಅಭಿವೃದ್ಧಿ ಹೆಮ್ಮೆ ಪಡುವಂತಿದೆ ಎಂಬ ಸಮಾಧಾನದ ಮಾತುಗಳನ್ನಾಡಿದರು.