ಕಾರವಾರ: ಆಕೆಗೆ ಕೇವಲ 11 ವರ್ಷ ಮಾತ್ರ. ಆದರೆ ಆಕೆ ಮಾಡಿರುವ ಕೆಲಸ ಇಡೀ ಜಗತ್ತು ಮೆಚ್ಚಿಸುವಂತದ್ದು. ತಂದೆಯ ಜೀವವನ್ನು ಕಾಪಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾಳೆ. ಅಂದ ಹಾಗೆ ಇವಳ ಹೆಸರು ಕೌಸಲ್ಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನವಳು.
ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಹೌದು, ಈಕೆಯ ತಂದೆ ಕಾರ್ಯಕ್ರಮದಲ್ಲಿ ಅಡುಗೆ ಮಾಡುವವರು. 2021ರ ಮಾರ್ಚ್ 15ರಂದು ಮಾವಿನಗುಂಡಿ ಸಮೀಪದ ಹಳ್ಳಿಯೊಂದಕ್ಕೆ ಅಡುಗೆ ಮಾಡಲು ಹೊರಟಿದ್ದ ವೇಳೆ ತಂದೆ ವೆಂಕಟರಮಣ ಹೆಗಡೆಯವರ ಜೊತೆ ಈಕೆಯೂ ಹಾಗೂ ಅವಳ ತಮ್ಮ ಇಬ್ಬರು ಹೋಗಿದ್ದರು. ಈ ವೇಳೆ ಇವರು ಸಂಚಾರ ಮಾಡುತ್ತಿದ್ದ ಜೀಪು ಪಲ್ಟಿಯಾಗಿದೆ. ಜೀಪಿನ ಅಡಿಯಲ್ಲಿ ವೆಂಕಟರಮಣ ಹಾಗೂ ಅವರ ತಮ್ಮ ಸಿಲುಕಿಕೊಂಡಿದ್ದಾರೆ.
ಈ ವೇಳೆ ಇಬ್ಬರನ್ನು ಹೊರ ತರೋದಿಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಅದು ಆಗದೇ ಇದ್ದಾಗ ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ದೂರ ಓಡಿ ಹೋಗಿ ಅಲ್ಲಿಂದ ಜನರನ್ನು ಕರೆತಂದು ಜೀಪನ್ನು ಎತ್ತಿಸೋ ಮೂಲಕ ತಂದೆ ಹಾಗೂ ತಮ್ಮನ ಜೀವವನ್ನು ಉಳಿಸಿದ್ದಳು. ಈಕೆಯ ಕೆಲಸ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ರಾಜ್ಯ ಸರ್ಕಾರವೂ ಈಕೆಯ ಸಾಧನೆಯನ್ನು ಗುರುತಿಸಿ ನವೆಂಬರ್ 14ರಂದು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನ ಪ್ರದಾನಿಸಿ ಗೌರವಿಸಲಿದೆ.