Breaking News

ತೆರಿಗೆ ವಿನಾಯಿತಿ ರದ್ದು: ದುಬಾರಿಯಾಗಲಿವೆ ಹೋಟೆಲ್ ರೂಮ್, ಆಸ್ಪತ್ರೆ ವಾರ್ಡ್ ಶುಲ್ಕ.

Spread the love

ನವದೆಹಲಿ: ಕೆಲವು ಸರಕುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ತೆಗೆದು ಹಾಕಬೇಕೆಂಬ ಪ್ರಸ್ತಾವನೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಅನುಮೋದನೆ ನೀಡಿದೆ. ಕೆಲ ವಸ್ತುಗಳ ತೆರಿಗೆ ಏರಿಕೆ ಬಗ್ಗೆ ಬುಧವಾರ ನಿರ್ಧಾರವಾಗುವ ಸಾಧ್ಯತೆ ಇದೆ.

 

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಚಂಡೀಗಢದಲ್ಲಿ ಮಂಗಳವಾರ ಆರಂಭವಾದ ಮಂಡಳಿಯ 47ನೇ ಸಭೆಯು ಕೆಲವು ಜಿಎಸ್​ಟಿ ದರಗಳಲ್ಲಿ ಬದಲಾವಣೆಗೆ ಒಪ್ಪಿಗೆ ನೀಡಿದೆ. ಚಿನ್ನ ಮತ್ತು ಅಮೂಲ್ಯ ಹರಳುಗಳ ಅಂತಾರಾಜ್ಯ ಸಾಗಾಟಕ್ಕೆ ರಾಜ್ಯಗಳು ಇ-ವೇ ಬಿಲ್ ಕೊಡುವುದಕ್ಕೂ ಸಭೆ ಸಮ್ಮತಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ವಂಚನೆ ತಡೆಯೂ ಸೇರಿ ತೆರಿಗೆ ಸುಧಾರಣೆಗೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಸಚಿವರ ಸಮಿತಿಗಳು ಸಲ್ಲಿಸಿದ ಮಧ್ಯಂತರ ವರದಿಗಳನ್ನು ಸಭೆ ಅಂಗೀಕರಿಸಿದೆ.

ಪರಿಹಾರ ವಿಸ್ತರಣೆ ಇಂದು ಚರ್ಚೆ: 2022ರ ಜೂನ್ ನಂತರವೂ ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ವಿಸ್ತರಣೆ, ಕ್ಯಾಸಿನೊ, ಆನ್​ಲೈನ್ ಗೇಮಿಂಗ್ ಮತ್ತು ಕುದುರೆ ಜೂಜಿನ ಮೇಲೆ ಶೇಕಡ 28 ಜಿಎಸ್​ಟಿ ಹೇರಿಕೆ ಮುಂತಾದ ಮಹತ್ವದ ವಿಚಾರಗಳನ್ನು ಸಭೆ ಬುಧವಾರ ಚರ್ಚೆಗೆ ಎತ್ತಿಕೊಳ್ಳಲಿದೆ. ಪರಿಹಾರವನ್ನು ವಿಸ್ತರಿಸಬೇಕು ಅಥವಾ ಆದಾಯದಲ್ಲಿನ ರಾಜ್ಯಗಳ ಪಾಲನ್ನು ಈಗಿನ ಶೇಕಡ 50ರಿಂದ ಹೆಚ್ಚು ಮಾಡಬೇಕು ಎಂದು ಪ್ರತಿಪಕ್ಷ ಆಡಳಿತದ ರಾಜ್ಯಗಳು ಆಗ್ರಹಿಸುತ್ತಾ ಬಂದಿವೆ. ಸಚಿವೆ ನಿರ್ಮಲಾ ಸೀತಾರಾಮನ್ ಮಂಡಳಿಯ ನಿರ್ಧಾರಗಳ ಕುರಿತು ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ.

ಛತ್ತೀಸ್​ಗಢ ಮಂತ್ರಿ ಪತ್ರ: ಜಿಎಸ್​ಟಿ ಪರಿಹಾರವನ್ನು ರಾಜ್ಯಗಳಿಗೆ ಇನ್ನೂ ಐದು ವರ್ಷ ವಿಸ್ತರಿಸುವಂತೆ ಆಗ್ರಹಿಸಿ ಛತ್ತೀಸ್​ಗಢದ ಹಣಕಾಸು ಮಂತ್ರಿ ಟಿ.ಎಸ್. ಸಿಂಗ್​ದೇವ್ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದಿದ್ದಾರೆ.

ಅಂಚೆ ಸೇವೆಗೆ ತೆರಿಗೆ: ಪೋಸ್ಟ್​ಕಾರ್ಡ್ ಮತ್ತು ಇನ್​ಲ್ಯಾಂಡ್ ಲೆಟರ್, 10 ಗ್ರಾಂಗಿಂತ ಕಡಿಮೆ ತೂಕದ ಬುಕ್​ಪೋಸ್ಟ್ ಮತ್ತು ಕವರ್​ಗಳನ್ನು ಹೊರತುಪಡಿಸಿ ಅಂಚೆ ಕಚೇರಿಯ ಉಳಿದೆಲ್ಲ ಸೇವೆಗಳಿಗೆ ತೆರಿಗೆ ವಿಧಿಸಬೇಕೆಂದೂ ಸಮಿತಿ ಶಿಫಾರಸು ಮಾಡಿದೆ. ಚೆಕ್​ಗಳಿಗೆ ಶೇಕಡ 18 ತೆರಿಗೆ ವಿಧಿಸಲೂ ಸೂಚಿಸಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ