ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರೈಲಿನ ಮೂಲಕವೇ ದ್ವಿಪಥ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ನಗರ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಈ ಹಿಂದೆ ಅವರ ಪತಿಯನ್ನೂ ಇದೇ ರೀತಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈಗ ರೇಖಾರನ್ನು ಹತ್ಯೆ ಮಾಡಲಾಗಿದೆ. 24 ಗಂಟೆಯೊಳಗೆ ಕೊಲೆ ಆರೋಪಿಗಳನ್ನು ಬಂಧಿಸಿ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಸದ ಪಿ.ಸಿ. ಮೋಹನ್ ಅವರ ಶಿಷ್ಯೆಯಾಗಿದ್ದ ರೇಖಾ ಕದಿರೇಶ್ 2010 ಮತ್ತು 2015ರಲ್ಲಿ ಎರಡು ಭಾರಿ ಛಲವಾದಿಪಾಳ್ಯ ಕಾರ್ಪೋರೇಟ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇಂದು(ಗುರುವಾರ) ಬೆಳಗ್ಗೆ ರೇಖಾರ ತನ್ನ ಕಚೇರಿ ಬಳಿ ಕರೊನಾ ಹಿನ್ನೆಲೆ ಬಡವರಿಗೆ ಉಪಾಹಾರ ವಿತರಣೆ ಮಾಡುತ್ತಿದ್ದರು. ಈ ವೇಳೆ ಕಚೇರಿ ಬಳಿ ಬಂದ ಆಗಂತುಕರು ರೇಖಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ದಾಳಿ ಆಗುತ್ತಿದ್ದಂತೆ ಪ್ರಾಣ ಉಳಿಸಿಕೊಳ್ಳಲು ಕಚೇರಿಯ ಓಳಗೆ ಓಡಿ ಹೋದ ರೇಖಾರನ್ನು ಅಟ್ಟಾಡಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕಲಿಲ್ಲ.