ಬೆಂಗಳೂರು, ಜೂ. 18: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನ ಕೈದಿಗಳಿಗೆ ಐಷಾರಾಮಿ ಸೌಲಭ್ಯ ಸಿಗುತ್ತಿರುವ ಸಂಗತಿ ಮತ್ತೆ ಚರ್ಚೆಗೆ ಬಂದಿದೆ. ಆರ್‌ಎಸ್‌ಎಸ್ ನಕಲಿ ನಾಯಕನ ಹೆಸರಿನಲ್ಲಿ ವಂಚಿಸಿ ಬಂಧನಕ್ಕೆ ಒಳಗಾಗಿರುವ ಯುವರಾಜ್, ಶಾಸಕ ಅರವಿಂದ್ ಬೆಲ್ಲದ್‌ಗೆ ಜೈಲಿನಿಂದಲೇ ಕರೆ ಮಾಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು ತನಿಖೆಗೆ ಆದೇಶಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತ ವಿರುದ್ಧ ದಂಗೆ ಎದ್ದಿರುವ ಭಿನ್ನಾಭಿಪ್ರಾಯ ಶಾಸಕರ ಸಾಲಿನಲ್ಲಿ ಅರವಿಂದ್ ಬೆಲ್ಲದ್ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ತನ್ನ ಪೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಮಾತ್ರವಲ್ಲ ಈ ಕುರಿತು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಜೈಲಿನಿಂದ ಕರೆ ಬಂದಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಕುರಿತು ಡಿಜಿಪಿ ಅವರು ತನಿಖೆ ನಡೆಸುವಂತೆ ಸೂಚಿಸಿದ್ದರು.
ಅರವಿಂದ ಬೆಲ್ಲದ ದೂರಿನ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಚಟುವಟಿಕೆ ಕುರಿತು ತನಿಖೆ ನಡೆಸಲಾಗುತ್ತಿದೆ. ಯುವರಾಜ್ ವಿರುದ್ಧ ಹಲವು ಅಪರಾಧ ಪ್ರಕರಣ ದಾಖಲಾಗಿವೆ. ವಿಚಾರಣಾಧೀನ ಬಂಧಿಯಾಗಿ ಜೈಲಿನಲ್ಲಿದ್ದಾನೆ. ಆತ ಮೊಬೈಲ್ ಪೋನ್ ಬಳಸಲು ಅವಕಾಶವೇ ಇಲ್ಲ. ಆದರೆ, ಯಡಿಯೂರಪ್ಪ ವಿರುದ್ಧ ದಂಗೆ ಎದ್ದಿರುವ ಅರವಿಂದ್ ಬೆಲ್ಲದ್‌ಗೆ ಯುವರಾಜ್ ಕರೆ ಮಾಡಿ ಧಮ್ಕಿ ಹಾಕಿರುವುದು ಅಚ್ಚರಿ ಮೂಡಿಸಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿ ಅನಧಿಕೃತ ಮೊಬೈಲ್ ಕರೆ, ಗಾಂಜಾ ಡೀಲಿಂಗ್ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇದು ಜೈಲು ಸಿಬ್ಬಂದಿ ನಡುವೆ ನಡುಕ ಹುಟ್ಟಿಸಿದೆ.
50 ರೂ. ಕೊಟ್ರೆ ಒಂದು ವಿಡಿಯೋ ಕಾಲ್: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಕರೆ ಹೀಗೆ ನಾನಾ ದಂಧೆಗಳು ಟಿಸಿಲೊಡೆದಿವೆ. ತಮಿಳುನಾಡಿನ ಮಾಜಿ ಸಿಎಂ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಜೈಲಿನ ಅಕ್ರಮ ಬಯಲಿಗೆ ಬಂದಿತ್ತು. ಕೈದಿಗಳ ಐಷಾರಾಮಿ ಸೌಲಭ್ಯದ ಬಗ್ಗೆ ತನಿಖೆ ನಡೆದಿತ್ತು. ಆನಂತರ ಜೈಲಿನ ಅಕ್ರಮ ದಂಧೆಗಳಿಗೆ ಬ್ರೇಕ್ ಬಿದ್ದಿದ್ದವು. ಇದೀಗ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ನೀಡುವುದು, ಕರೆ ಮಾಡುವುದು ಕೂಡ ದಂಧೆಯಾಗಿ ರೂಪಾಂತರಗೊಂಡಿದೆ. ದುಡ್ಡು ಕೊಟ್ಟರೆ ಜೈಲಿನಿಂದಲೇ ಕೈದಿಗಳು ವಿಡಿಯೋ ಕಾಲ್ ಮಾಡಬಹುದು. ದುಡ್ಡು ಕೊಟ್ಟರೆ ಜೈಲಿನೊಳಗೆ ಗಾಂಜಾ ರವಾನೆಯಾಗುತ್ತದೆ ಎಂಬ ಆರೋಪಗಳಿವೆ. ಇದೀಗ ಅರವಿಂದ್ ಬೆಲ್ಲದ್ ದೂರಿನ ಹಿನ್ನೆಲೆಯಲ್ಲಿ ಮತ್ತೆ ಜೈಲು ಅಕ್ರಮದ ಬಗ್ಗೆ ತನಿಖೆಗೆ ಚಾಲನೆ ಸಿಕ್ಕಿದೆ.