ಬೆಂಗಳೂರು : ಹನ್ನೊಂದು ದಿನಗಳಿಂದ ಸಾರಿಗೆ ನೌಕರರು ಕರ್ತವ್ಯದತ್ತ ಮುಖ ಮಾಡುತ್ತಿಲ್ಲ. ಆದರೆ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ಕೆಲವು ನೌಕರರು ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ!
ಒಂದೆಡೆ ಬೆಂಗಳೂರಿನ ಕೇಂದ್ರ ಕಚೇರಿ ಮತ್ತು ವಿವಿಧ ಡಿಪೋಗಳಲ್ಲಿ ಅಧಿಕಾರಿಗಳು ಬೆಳಗಿನ ಜಾವ 4ರ ವರೆಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೂಂದೆಡೆ ನೌಕರರು ರಾತ್ರಿಯಾಗುತ್ತಿದ್ದಂತೆಯೇ ಸಹೋದ್ಯೋಗಿಗಳ ಮನವೊಲಿಕೆಗೆ ಇಳಿಯುತ್ತಿದ್ದಾರೆ.
ಅಧಿಕಾರಿಗಳು ನಿತ್ಯ ಸಂಜೆ ಹೊರಡಿಸುವ ಅಮಾನತು, ವಜಾ, ವರ್ಗಾವಣೆ ಪಟ್ಟಿಗಾಗಿ ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ.
ರಾತ್ರಿಯೇ ಮನವೊಲಿಕೆ
ಇದಕ್ಕೆ ಪ್ರತಿಯಾಗಿ ರಾತ್ರಿಯೇ ನೌಕರರ ಕೂಟ ಮುಷ್ಕರ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿವೆ. ರಾತ್ರಿಯಾಗುತ್ತಿದ್ದಂತೆ ಆನ್‌ಲೈನ್ ಮೂಲಕ ನೌಕರರನ್ನು ಹಿಡಿದಿಡುವ ಪ್ರಯತ್ನ ನಡೆಸುತ್ತಿವೆ.
ಮುಷ್ಕರ ತೀವ್ರ
ದಿನದಿಂದ ದಿನಕ್ಕೆ ಬಸ್ ಸಂಚಾರ ಹೆಚ್ಚುತ್ತಿರುವ ಬೆನ್ನಲ್ಲೇ ಮುಷ್ಕರವನ್ನು ತೀವ್ರಗೊಳಿಸಲು ಸಾರಿಗೆ ನೌಕರರ ಕೂಟ ನಿರ್ಧರಿಸಿದೆ. ಸೋಮವಾರದಿಂದ ಅಧಿಕ ಬಸ್‌ಗಳು ಸಂಚರಿಸುವ ಡಿಪೋಗಳ ವ್ಯಾಪ್ತಿಯಲ್ಲೇ ಸತ್ಯಾಗ್ರಹ ನಡೆಸಲು ಮುಂದಾಗಿದೆ.