ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿಗೊಳಗಾಗಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಮಂಗಳವಾರ ವಿಕ್ಟರ್ ಸೈಮನ್ ಅವರ ಮನೆ ಮತ್ತು ಇತರ ಕೆಲವು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆದಿತ್ತು. ಮನೆಯಲ್ಲಿ ₹1 ಕೋಟಿ ಮೌಲ್ಯದ ಬಾಂಡ್ ಪೇಪರ್ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು.
‘ಇನ್ನೂ ಕೆಲವು ಆಸ್ತಿಗಳ ಮಾಹಿತಿ ಲಭಿಸಿದೆ. ಬಾಂಡ್ ಪೇಪರ್ ಇರಿಸಿಕೊಂಡಿದ್ದರ ಉದ್ದೇಶದ ಕುರಿತೂ ತನಿಖೆ ನಡೆಯುತ್ತಿದೆ. ವಿಕ್ಟರ್ ಸೈಮನ್ ತನಿಖೆಗೆ ಸಹಕರಿಸುತ್ತಿಲ್ಲ. ಈ ಕಾರಣದಿಂದ ಬಂಧಿಸಲಾಗಿದೆ’ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.