ಬೆಳಗಾವಿ: ಇಲ್ಲಿನ ಗೊಂದಳಿ ಗಲ್ಲಿಯಲ್ಲಿ ಶನಿವಾರ ರಾತ್ರಿ ಹಳೆ ಮನೆಯೊಂದು ಪಕ್ಕದ ಮನೆಯ ಮೇಲೆ ದಿಢೀರ್ ಕುಸಿದು ಬಿದ್ದಿದ್ದರಿಂದ, ಒಳಗೆ ಸಿಲುಕಿದ್ದ ಬಾಲಕ ಮತ್ತು ಬಾಲಕಿ ಸೇರಿದಂತೆ 12 ಮಂದಿಯನ್ನು ರಕ್ಷಿಸಲಾಗಿದೆ.
ಘಟನೆಯಿಂದಾಗಿ ಸುತ್ತಮುತ್ತಲಿನ ಮನೆಗಳವರು ಆತಂಕಗೊಂಡಿದ್ದರು.
ಡಾ.ಕೋಟೂರು ಎನ್ನುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಹಳೆಯದಾಗಿದ್ದ ಆ ಕಟ್ಟಡ ಸತತ ಮಳೆಯಿಂದಾಗಿ ಮತ್ತಷ್ಟು ಶಿಥಿಲಗೊಂಡಿತ್ತು. ಅದಕ್ಕೆ ಹೊಂದಿಕೊಂಡಂತೆ ಇದ್ದ ಗೋಡೆಯು ನಗರಪಾಲಿಕೆ ಮಾಜಿ ಸದಸ್ಯೆ ಶಶಿಕಲಾ ಸುರೇಕರ ಅವರ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿದ್ದ ಮೂರು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದವು.
ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಹೆಸ್ಕಾಂ ಸಿಬ್ಬಂದಿ ಜೆಸಿಬಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಸುರೇಕರ ಕುಟುಂಬದ ಅಶೋಕ, ಶಶಿಕಲಾ, ಪ್ರಕಾಶ, ಲತಾ, ಮಹಾದೇವ, ಕಮಲಾ, ಚಿಂತಾಮಣಿ, ಪ್ರಣವ, ರಚಿತಾ ಹಾಗೂ ಪೂನಂ ಮತ್ತು ವೀರಗಜಾನನ ಪಾಳೇಕರ, ಗಾಯತ್ರಿ ಪಾಳೇಕರ ಅಪಾಯದಿಂದ ಪಾರಾದವರು.
‘ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಅಪಾಯಕ್ಕೆ ಸಿಲುಕಿದ್ದವರನ್ನು ರಕ್ಷಿಸಲಾಗಿದೆ’ ಎಂದು ಖಡೇಬಜಾರ್ ಠಾಣೆ ಇನ್‌ಸ್ಪೆಕ್ಟರ್ ಧೀರಜ್ ಶಿಂಧೆ ತಿಳಿಸಿದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??