ಬೆಳಗಾವಿ: ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಪತನದಲ್ಲಿ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪೊಲೀಸ್ ಅಧಿಕಾರಿ, ಬೆಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಅರುಣ ಸಾಳುಂಕೆ ದುರಂತ ಅಂತ್ಯ ಕಂಡಿದ್ದಾರೆ. ಮೂಲತಃ ಅಥಣಿ ತಾಲೂಕಿನ ಅರಟಾಳ ಗ್ರಾಮದವರಾದ ಅರುಣ ಅವರ ಅಕಾಲಿಕ ನಿಧನದಿಂದ ಸ್ವಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ ಅವರ ತಂದೆ ಮನೋಹರ ಹಾಗೂ ಕಿರಿಯ ಸಹೋದರ ಅಮರ ಕಣ್ಣೀರು ಹಾಕಿದ್ದಾರೆ. “ಅರುಣ ನಮ್ಮ ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಊರಿನ ಯುವಕರಿಗೆಲ್ಲ ಆತನೇ ಮಾದರಿಯಾಗಿದ್ದ. ಮಗಳೆಂದರೆ ಜೀವ ಬಿಡುತ್ತಿದ್ದ ಆತ, ‘ದೀಪಾವಳಿ ಹಬ್ಬಕ್ಕೆ ಊರಿಗೆ ಬರುತ್ತೇನೆ’ ಎಂದು ಹೇಳಿದ್ದ. ಆದರೆ ಈಗ ನಮಗೆ ಮಗನ ಶವ ನೋಡುವ ಪರಿಸ್ಥಿತಿ ಬಂದಿದೆ. ನಾವಿಂದು ಅನಾಥರಾಗಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಅರುಣ ಅವರ ಪತ್ನಿ ಹಾಗೂ ಮಕ್ಕಳು ದಸರಾ ಹಬ್ಬಕ್ಕೆ ಅರಟಾಳ ಗ್ರಾಮಕ್ಕೆ ಬಂದಿದ್ದರು. ಕರ್ತವ್ಯದ ಒತ್ತಡದಿಂದಾಗಿ ಅರುಣ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ನಂತರ ಗೆಳೆಯರೊಂದಿಗೆ ಸೇರಿ ಕೇದಾರನಾಥ, ಬದರಿನಾಥ ಸೇರಿದಂತೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ಹೀಗಾಗಿ ಪತ್ನಿ ಮತ್ತು ಮಕ್ಕಳು ಮರಳಿ ಬೆಂಗಳೂರಿಗೆ ತೆರಳಿದ್ದರು.
ಅ.27 ರಂದು ಗೆಳೆಯರೊಂದಿಗೆ ಪ್ರಯಾಣ ಬೆಳೆಸಿದ್ದ ಅರುಣ ಅ.28 – 29 ರಂದು ಕುಟುಂಬಸ್ಥರೊಂದಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಕೇದಾರನಾಥ, ಬದರಿನಾಥ ದೇಗುಲಗಳ ದರ್ಶನ ಮಾಡಿಸಿದ್ದರು. ಅ.30 ರಂದು ಮಧ್ಯಾಹ್ನ ಸುಮಾರು 3:30ರ ವೇಳೆಗೆ ಅರುಣ ಮತ್ತು ಗೆಳೆಯರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ಕರಾಳ ಸುದ್ದಿ ಕುಟುಂಬಕ್ಕೆ ತಲುಪಿತ್ತು.
ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯದೆ, ನೇರವಾಗಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಸಿದ್ಧಪಡಿಸಲಾದ ಜಾಗಕ್ಕೆ ತರಲಾಗುವುದು. ಅರುಣ ಅವರ ಸ್ವಂತ ಜಮೀನಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಮರಾಠಾ ಸಂಪ್ರದಾಯದ ಪ್ರಕಾರ ಅಗ್ನಿಸ್ಪರ್ಶ ಮಾಡುವ ಮೂಲಕ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
Laxmi News 24×7