ನವದೆಹಲಿ: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಪೊಲೀಸ್ ತನಿಖೆ ಮಹತ್ವದ ಹಂತ ತಲುಪಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ಬೀಡುಬಿಟ್ಟಿರುವ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದು, ಸಂಜೆ ಇಬ್ಬರೂ ನಾಯಕರ ನಡುವೆ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಆಂತರಿಕ ಬೆಳವಣಿಗೆಗಳ ಕುರಿತು ಪ್ರಮುಖ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.
ಮಹಿಳೆಯೊಬ್ಬರ ಸಂದರ್ಶನವನ್ನು ಮುಂದಿಟ್ಟುಕೊಂಡು ಹೆಣೆಯಲಾದ ಕಟ್ಟುಕಥೆ, ಅದರಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ತಳುಕು ಹಾಕಿರುವುದು ಹಾಗೂ ಇದರ ಆಧಾರದಲ್ಲಿ ನಡೆದ ಬ್ಲ್ಯಾಕ್ಮೇಲ್ ಯತ್ನಗಳ ಕುರಿತು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಿದ್ದಾರೆ. ಈ ಷಡ್ಯಂತ್ರದಲ್ಲಿ ಸ್ವಪಕ್ಷೀಯರೇ ಶಾಮೀಲಾಗಿರುವ ಶಂಕೆ ಇರುವುದರಿಂದ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಸೂತ್ರಧಾರಿಗಳನ್ನು ಬಯಲಿಗೆಳೆಯುವಂತೆ ಆಗ್ರಹಿಸುವ ನಿರೀಕ್ಷೆಯಿದೆ.
ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲದಿದ್ದರೂ ರಾಜಕೀಯ ಬದುಕಿಗೆ ಮಸಿ ಬಳಿಯಲು ಹುನ್ನಾರ ನಡೆಸಲಾಗಿದೆ ಎಂಬ ಅಸಮಾಧಾನವನ್ನು ಅವರು ಹೈಕಮಾಂಡ್ ಮುಂದೆ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಪೊಲೀಸರ ತನಿಖೆ ಮುಂದುವರಿದಿದ್ದು, ಈ ವಿಡಿಯೋದ ಮೂಲ ಮತ್ತು ಇದರ ಹಿಂದಿರುವ ಕಾಣದ ಕೈಗಳ ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದು ಆಗ್ರಹಿಸುವ ಸಾಧ್ಯತೆಯಿದೆ.
ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಿದ್ದರೂ, ಆ ಭೇಟಿಯು ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗಿತ್ತು.
Laxmi News 24×7