ಬೆಂಗಳೂರು: ರಾಜಧಾನಿ ದೆಹಲಿ ಇಂದು ಸಂಪೂರ್ಣ ಸ್ಥಬ್ದವಾಗಲು ಕೇಂದ್ರ ಸರ್ಕಾರವೇ ನೇರ ಹೊಣೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಿಜೆಪಿ ಪ್ರತಿಭಟನೆಗೆ ನಿರ್ಬಂಧ ಹೇರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯಾರಿಗೆ ರಕ್ಷಣೆ ನೀಡುತ್ತಿದೆ? ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬೆನ್ನಿಗೆ ನಿಲ್ಲುತ್ತಿರುವುದೇಕೆ? ಸುಪ್ರೀಂ ಕೋರ್ಟ್ ಪ್ರಶ್ನಿಸಿದರೂ ಸಹ ಅವರ ಕೆಟ್ಟ ಕೆಲಸಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಅವರಿಗೆ ನ್ಯಾಯಾಂಗ ರಕ್ಷಣೆ ನೀಡುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ದೆಹಲಿಗೆ ಸುಮಾರು 70,000 ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಜೆನ್ ಜಿ ಯುವ ಪ್ರತಿಭಟನಕಾರರ ಮೇಲೆ ಪ್ರಯೋಗಿಸಲು ನಿರ್ದಿಷ್ಟ ಅಸ್ತ್ರ-ಶಸ್ತ್ರಗಳನ್ನು ತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋರಾಟಗಾರರನ್ನು ಕಂಡರೆ ಯಾಕಿಷ್ಟು ಭಯ? ಹಿಂದೆ ಧರ್ಮೇಂದ್ರ ಪ್ರಧಾನ್ ವಿರುದ್ಧದ ಹೋರಾಟದ ವೇಳೆ ತೋರಿದಂತೆಯೇ ಸರ್ಕಾರ ಈಗಲೂ ಮೂರ್ಖತನ ಪ್ರದರ್ಶಿಸುತ್ತಿದೆ. ನಾವು ಬೆಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿರಲಿಲ್ಲವೇ ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಿಟ್ಟರೆ ಬೇರೆ ಗಂಡಸೇ ಇಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಮುಗಿಸಲು ಇವರು ಹೊರಟಿದ್ದಾರೆ. ಪ್ರಧಾನಿಯವರಿಗೆ ನಿಜವಾಗಿಯೂ ಧೈರ್ಯವಿದೆಯೇ? ಒಂದು ಮುಕ್ತ ಸುದ್ದಿಗೋಷ್ಠಿ ನಡೆಸಲು ಅವರಿಗೆ ಸಾಧ್ಯವಾಗಿಲ್ಲ. ಕೇವಲ ರೀಲ್ಸ್ ಮಾಡಿಕೊಂಡೇ ದೇಶವನ್ನು ಆಳಲು ಸಾಧ್ಯವೇ ಎಂದು ಲೇವಡಿ ಮಾಡಿದ್ದಾರೆ.
ಹಿಂದೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದಂತೆ ಜ್ಞಾನೇಶ್ ಕುಮಾರ್ ಕೂಡ ರಾಜೀನಾಮೆ ನೀಡಲೇಬೇಕಾಗುತ್ತದೆ. ಕೇವಲ ಒಂದು ಪ್ರತಿಭಟನೆಗೆ ಹೆದರಿ ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಿದ್ದಾರೆ. ಈ ಭಯದಿಂದಲೇ ಇವರು ನಾಳೆ-ನಾಡಿದ್ದರಲ್ಲಿ ನಾಗ್ಪುರದ ಬಾಗಿಲು ತಟ್ಟಿ, ‘ಏನಾದರೂ ಮಾಡಿ ರಕ್ಷಿಸಿ’ ಎಂದು ಬೇಡಿಕೊಳ್ಳಲಿದ್ದಾರೆ ನೋಡಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
Laxmi News 24×7