ಚಿಕ್ಕಬಳ್ಳಾಪುರ: ಬಾಡಿಗೆ ರೂಮ್ನಲ್ಲಿ ವಾಸವಾಗಿದ್ದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಹಿಂದೂಪುರ ಮೂಲದ 21 ವರ್ಷದ ಸಾಯಿ ತರುಣ್ ರೆಡ್ಡಿ ಮೃತ ವಿದ್ಯಾರ್ಥಿ. ಮುಂಜಾನೆ ಎಂದಿನಂತೆ ಕಾಲೇಜಿಗೆ ತೆರಳಬೇಕಿದ್ದ ವಿದ್ಯಾರ್ಥಿ ರೂಮ್ನಲ್ಲೇ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದ ಸಾಯಿ ತರುಣ್, ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ.
ಬೆಳಗ್ಗೆ ಎಂದಿನಂತೆ ಸ್ನೇಹಿತನೊಬ್ಬ ಸಾಯಿ ತರುಣ್ ರೂಮ್ ಬಳಿ ಬಂದು ಬಾಗಿಲು ತಟ್ಟಿದ್ದಾನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ವಿದ್ಯಾರ್ಥಿ ಮಲಗಿರಬಹುದು ಎಂದು ಭಾವಿಸಿ ಸ್ನೇಹಿತ ಕಾಲೇಜಿಗೆ ತೆರಳಿದ್ದಾನೆ. ಕಾಲೇಜಿಗೂ ಸಾಯಿ ತರುಣ್ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರಿಗೆ ಅನುಮಾನ ಮೂಡಿದೆ. ಮೊಬೈಲ್ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸ್ನೇಹಿತರು ಮತ್ತೆ ರೂಮ್ಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಗಿಲು ತೆರೆದು ನೋಡಿದಾಗ ಸಾಯಿ ತರುಣ್ ಮೃತಪಟ್ಟಿರುವುದು ಪತ್ತೆಯಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮಗನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
Laxmi News 24×7