ಬಳ್ಳಾರಿ: ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯ ಸರ್ಕಾರ ‘ವಂದೇ ಮಾತರಂ’ ಗೀತೆಯನ್ನ ಮೊಟಕುಗೊಳಿಸಿದೆ. ರೈತರು, ದಲಿತರು ನಾವೆಲ್ಲ ಒಟ್ಟಾಗಿ ಹಿಂದೂಗಳ ಪರ ಇರುವ ಸರ್ಕಾರವನ್ನ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದರು.
ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ `ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಬಿಜೆಪಿ ನಾಯಕರು, ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ ವಿಜಯೇಂದ್ರ, ಇದೊಂದು ಐತಿಹಾಸಿಕ ಪಾದಯಾತ್ರೆ ಎಂದು ಬಣ್ಣಿಸಿದರು.
ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 10 ದಿನಗಳ ಕಾಲ ಪಾದಯಾತ್ರೆ ನಡೆಸಲಾಗಿದೆ. ಈ ವೇಳೆ ದಲಿತರು, ಬಡವರು, ರೈತರು ಹಾಗೂ ವಿವಿಧ ವರ್ಗಗಳ ಜನರ ಸಮಸ್ಯೆಗಳನ್ನ ನೇರವಾಗಿ ಆಲಿಸಿದ್ದೇವೆ. ಈ ಪಾದಯಾತ್ರೆ ತಮ್ಮ ಹೃದಯ ಹಾಗೂ ಕಣ್ಣುಗಳನ್ನ ತೆರೆಸಿದೆ ಎಂದು ಹೇಳಿದರು.
‘ವಂದೇ ಮಾತರಂ’ ಗೀತೆ ಮೊಟಕು
ಕೇಂದ್ರ ಸರ್ಕಾರ ಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಹಾಡುವಂತೆ ಸೂಚಿಸಿದ್ದರೂ, ರಾಜ್ಯ ಸರ್ಕಾರ ಕೇವಲ ಎರಡು ಚರಣಗಳನ್ನ ಹಾಡುವಂತೆ ಆದೇಶಿಸಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ವಂದೇ ಮಾತರಂ ಗೀತೆಗೆ ಕತ್ತರಿ ಹಾಕಲಾಗಿದೆ. ಈ ವಿಚಾರವಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಮತ್ತೆ ಮನೆಗೆ ಕಳುಹಿಸಲಿದ್ದಾರೆ ಎಂದು ಅವರು ಹೇಳಿದರು.
ದಲಿತರ ಹಣ ದುರ್ಬಳಕೆ ಆರೋಪ
ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯ ಹಣವನ್ನ ದುರ್ಬಳಕೆ ಮಾಡಿಕೊಂಡಿದೆ ಎಂದು ವಿಜಯೇಂದ್ರ ಆರೋಪಿಸಿದರು. ಸುಮಾರು 45 ಸಾವಿರ ಕೋಟಿ ದಲಿತರ ಹಣವನ್ನ ಬೇರೆ ಬೇರೆ ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು. ವಾಲ್ಮೀಕಿ ನಿಗಮದ ಹಣವನ್ನ ವಾಪಸ್ ತರಬೇಕು. ದಲಿತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ಯುವಕರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಎರಡೂವರೆ ಲಕ್ಷ ಹುದ್ದೆಗಳನ್ನ ಭರ್ತಿ ಮಾಡುವ ಭರವಸೆ ನೀಡಿದ್ದರೂ ಅದನ್ನು ಈಡೇರಿಸಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳ ಹಣ ಪಾವತಿಯಾಗಿಲ್ಲ ಎಂದು ಆರೋಪಗಳ ಮಳೆ ಸುರಿಸಿದ್ರು.
ಡಿಕೆಶಿ ವಿರುದ್ಧ ವಾಗ್ದಾಳಿ
ಕಳೆದ ಮೂರು ತಿಂಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಮತ್ತು ವಿಮಾನ ನಿಲ್ದಾಣದ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ಬರ, ರೈತರ ಸಮಸ್ಯೆ, ಅಭಿವೃದ್ಧಿ ಹಾಗೂ ಸಾಲಮನ್ನಾ ಕುರಿತು ತಲೆಕೆಡಿಸಿಕೊಂಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನವಲಿ ಜಲಾಶಯಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯ ಬಗ್ಗೆ ಗಮನ ಹರಿಸಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲವೇ ಎಂದು ಕಿಡಿ ಕಾರಿದರು.
ಯಡಿಯೂರಪ್ಪ ಅವರು ಹೋರಾಟದ ಹಿನ್ನೆಲೆಯಿಂದ ಬಂದು ರಾಜ್ಯಕ್ಕೆ ಹಲವು ಯೋಜನೆಗಳನ್ನ ನೀಡಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ‘ಹಾರಾಟ’ದಿಂದ ಬಂದು ಅಭಿವೃದ್ಧಿ ಮಾಡದೆ ಎಲ್ಲ ಸಮುದಾಯಗಳಿಗೂ ಅನ್ಯಾಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರೇ ತಮ್ಮನ್ನು 90% ಬ್ಯುಸಿನೆಸ್‌ಮ್ಯಾನ್ ಹಾಗೂ 10% ರಾಜಕಾರಣಿ ಎಂದು ಹೇಳಿಕೊಂಡಿದ್ದಾರೆ. ಇಂತಹ ಬಿಸಿನೆಸ್ ಮನಸ್ಥಿತಿಯ ಮುಖ್ಯಮಂತ್ರಿಯನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಅವರು ಆಕ್ರೋಶ ಹೊರಹಾಕಿದರು.
ಬರ ಪರಿಹಾರಕ್ಕೆ 2,000 ಕೋಟಿ ನೀಡುವಂತೆ ಆಗ್ರಹ
ಬರ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಕನಿಷ್ಠ 2,000 ಕೋಟಿ ಅನುದಾನ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರಲ್ಲದೇ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 3.5 ಲಕ್ಷ ರೂ. ಪರಿಹಾರ ನೀಡಿದ್ದರು. ತಕ್ಷಣದ ಅಗತ್ಯಗಳಿಗಾಗಿ 10 ಸಾವಿರ ರೂ. ನೆರವು ನೀಡಿದ್ದರು. ಆದರೆ ಪ್ರಸ್ತುತ ಸರ್ಕಾರ ಬರ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರುತ್ತಿಲ್ಲ ಎಂದು ಅವರು ಟೀಕಿಸಿದರು.
ಮಹಾರಾಷ್ಟ್ರದಲ್ಲಿ ಫಡ್ನವೀಸ್ ನೇತೃತ್ವದ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಅವರು ಕೇಂದ್ರ ಸರ್ಕಾರದ ನೆರವಿಗಾಗಿ ಕಾಯುತ್ತಾ ಕುಳಿತಿಲ್ಲ. ರೈತರನ್ನು ನಿರ್ಲಕ್ಷಿಸಿದ್ರೆ ಅವರು ಬೀದಿಗಿಳಿಯಬೇಕಾಗುತ್ತದೆ. ರೈತರ ಕೋಪ ಕಟ್ಟಿಕೊಂಡ ಯಾವುದೇ ಸರ್ಕಾರವೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
‘ರೈತರು, ದಲಿತರು, ಹಿಂದೂಗಳ ಪರ ಸರ್ಕಾರ ತರಬೇಕು’
ಕಾಂಗ್ರೆಸ್ ಸರ್ಕಾರ ತಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಬೈಸಿಕಲ್ ಯೋಜನೆ, ಭಾಗ್ಯಲಕ್ಷ್ಮಿ ಬಾಂಡ್ ಹಾಗೂ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ನಿಲ್ಲಿಸಲಾಗಿದೆ. ರಾಜ್ಯದಲ್ಲಿ ಇಸ್ಪೀಟ್ ದಂಧೆ ಹೆಚ್ಚಾಗಿದೆ. ಸರ್ಕಾರ ಟೇಕಾಫ್ ಆಗುತ್ತಿಲ್ಲ ಎಂದು ಕಾಂಗ್ರೆಸ್ ಸಚಿವರೇ ಹೇಳುತ್ತಿದ್ದಾರೆ. ‘ಭಾರತ್ ಜೋಡೋ’ ಹೆಸರಿನಲ್ಲಿ ಕಾಂಗ್ರೆಸ್ ನಾಟಕ ಆಡಲು ಹೊರಟಿದೆ. ಜನರು ಈ ಕಪಟ ನಾಟಕವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ರಾಜ್ಯ ಸರ್ಕಾರವನ್ನ ಅಧಿಕಾರದಿಂದ ಕೆಳಗಿಳಿಸಲು ಜನರು ತೀರ್ಮಾನಿಸಿದ್ದಾರೆ. ಆದ್ದರಿಂದ ನಾವೆಲ್ಲ ಒಟ್ಟಾಗಿ ರೈತರು, ದಲಿತರು ಹಾಗೂ ಹಿಂದೂಗಳ ಪರ ಇರುವ ಸರ್ಕಾರವನ್ನ ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ಅವರು ಕರೆ ನೀಡಿದರು.
‘ನಮ್ಮ ಹೋರಾಟ ನಿಂತಿಲ್ಲ’
ಪಾದಯಾತ್ರೆ 10ನೇ ದಿನ ಮುಗಿದಿರಬಹುದು. ಆದರೆ ನಮ್ಮ ಹೋರಾಟ ನಿಂತಿಲ್ಲ, ನಿಲ್ಲುವುದೂ ಇಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಹೋರಾಟ ಮುಂದುವರಿಯಲಿದೆ. ತಾವು ಮನೆಯಲ್ಲಿ ಕೂರುವುದಿಲ್ಲ. ರಾಜ್ಯದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಆಲಿಸುವುದಾಗಿ ಅವರು ಹೇಳಿದರು. ಅಲ್ಲದೇ ಅಕ್ಟೋಬರ್ 17ರವರೆಗೆ ‘ಸೇವಾ ಸಂಕಲ್ಪ’ ಕಾರ್ಯಕ್ರಮ ನಡೆಸಲಾಗುವುದು. ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಮನೆಮನೆಗೆ ತೆರಳಿ ಜನರಿಗೆ ಮಾಹಿತಿ ನೀಡಲಾಗುವುದು ಎಂದರು.
Laxmi News 24×7