Breaking News

ಲಿಂಗರಾಜ ಕಾಲೇಜಿನಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ

Spread the love

ಲಿಂಗರಾಜ ಕಾಲೇಜಿನಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ
ದೇಶಪ್ರೇಮವೆಂದರೆ ದೇಶದ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿಯುವುದು: ಮೇಜರ್ ಮಹೇಶ ಗುರನಗೌಡರ
ಬೆಳಗಾವಿ, ಆ. 10:* ಅಸಂಖ್ಯಾತ ಮಹನೀಯರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಮರ್ಪಣಾಭಾವದಿಂದ ದುಡಿಯಬೇಕು. ನಮ್ಮಲ್ಲಿ ‘ದೇಶ ನನ್ನದು’ ಎಂಬ ಹೆಮ್ಮೆ ಹಾಗೂ ಜವಾಬ್ದಾರಿಯ ಭಾವನೆ ಬೆಳೆಸಿಕೊಳ್ಳಬೇಕು ಎಂದು ಲಿಂಗರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ಮೇಜರ್ ಮಹೇಶ ಗುರನಗೌಡರ ಕರೆ ನೀಡಿದರು.
ಲಿಂಗರಾಜ ಕಾಲೇಜಿನಲ್ಲಿ 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ ಅಡಿಯಲ್ಲಿ ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರಾಭಿಮಾನವೆಂದರೆ ಕೇವಲ ಸೈನಿಕನಾಗಿ ದೇಶಸೇವೆ ಮಾಡುವುದಷ್ಟೇ ಅಲ್ಲ. ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಶಿಸ್ತು ಮತ್ತು ಸಮಯಪಾಲನೆ ರೂಢಿಸಿಕೊಳ್ಳುವುದು ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸುವುದೂ ದೇಶಸೇವೆಯೇ ಆಗಿದೆ. ಸ್ವಾರ್ಥವನ್ನು ಬದಿಗಿಟ್ಟು ರಾಷ್ಟ್ರದ ಹಿತವನ್ನು ಮೊದಲಿಗಾಗಿಸಿಕೊಂಡು ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
26 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ನ ತರಬೇತುದಾರ ಜೆಸಿಒ ಸುಭಾಷ ಭಟ್ ಮಾತನಾಡಿ, ಭಾರತವು ವಿವಿಧ ಭಾಷೆ, ಧರ್ಮ, ಸಂಸ್ಕೃತಿ ಹಾಗೂ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿರುವ ರಾಷ್ಟ್ರವಾಗಿದೆ. ‘ವೈವಿಧ್ಯತೆಯಲ್ಲಿ ಏಕತೆ’ ಭಾರತದ ವಿಶಿಷ್ಟತೆ. ದೇಶ ನಮಗೆ ನೀಡಿರುವ ಅವಕಾಶಗಳು ಮತ್ತು ಸೌಲಭ್ಯಗಳ ಅರಿವು ಹೊಂದಿ, ರಾಷ್ಟ್ರದ ಹಿತ ಹಾಗೂ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
25 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಹಾಗೂ ಆರ್‌.ಎಲ್. ವಿಜ್ಞಾನ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಶಿವಾನಂದ ಬುಲಬುಲೆ ಮಾತನಾಡಿ, ದೇಶಸೇವೆ ಅತ್ಯಂತ ಶ್ರೇಷ್ಠವಾದ ಸೇವೆಯಾಗಿದೆ. ದೇಶ ನಮಗೆ ನೀಡಿರುವ ಋಣವನ್ನು ಎಷ್ಟು ತೀರಿಸಿದರೂ ಕಡಿಮೆಯೇ. ವಿದ್ಯಾರ್ಥಿಗಳು ತಾವು ಕಲಿತ ಜ್ಞಾನ, ಕೌಶಲ್ಯ ಮತ್ತು ಪ್ರತಿಭೆಯನ್ನು ದೇಶದ ಅಭ್ಯುದಯಕ್ಕೆ ಮೀಸಲಿಡಬೇಕು. ಎನ್‌ಸಿಸಿ ಕೆಡೆಟ್‌ಗಳು ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಂಡು, ತಮ್ಮ ಸುತ್ತಮುತ್ತಲಿನ ಜನರಲ್ಲಿ ರಾಷ್ಟ್ರಾಭಿಮಾನದ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಸಿಗೆ ನೀರುಣಿಸುವ ಮೂಲಕ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು. ಬಳಿಕ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ತ್ಯಾಗವೀರ ಸಿರಸಂಗಿ ಲಿಂಗರಾಜ ರಸ್ತೆಯುದ್ದಕ್ಕೂ ಲಿಂಗರಾಜ ಕಾಲೇಜು ಹಾಗೂ ಆರ್‌.ಎಲ್‌.ವಿಜ್ಞಾನ ಕಾಲೇಜಿನ ನೂರಾರಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಘೋಷಣೆಗಳನ್ನು ಮೊಳಗಿಸುತ್ತ ಪಥಸಂಚಲನ ನಡೆಸಿದರು. ಪಥಸಂಚಲನದ ಮೂಲಕ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮ, ದೇಶದ ಏಕತೆ ಹಾಗೂ ಸ್ವಾತಂತ್ರ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

Spread the love

About Laxminews 24x7

Check Also

ಸದಾಶಿವ ನಗರದ ಗಣಾಚಾರಿ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿ

Spread the love ಸದಾಶಿವ ನಗರದ ಗಣಾಚಾರಿ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿ • ಗಣಾಚಾರಿ ರುದ್ರಭೂಮಿಯಲ್ಲಿ ಸಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ