ಬೆಳಗಾವಿ:ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧಗಳ ಜತೆಗೆ ಮಹಿಳೆಯರ ಮೇಲೆ ವಿವಿಧ ತೆರನಾದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಕಳವಳ ವ್ಯಕ್ತಪಡಿಸಿದರು.
ನಗರದ ಮಹೇಶ್ವರ ಅಂಧ ಮಕ್ಕಳ ಶಾಲೆಯ ಆವರಣದಲ್ಲಿ ಗುರುವಾರ ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಗೆ ತಡೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ, ಗ್ರಾಮೀಣ ಭಾಗದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಜನರಲ್ಲಿ ನಿರಂತರ ಜಾಗೃತಿ ಮೂಡಿಲಾಗುತ್ತಿದೆ ಎಂದರು.
ಈಗಾಗಲೇ ಮಕ್ಕಳು, ಮಹಿಳೆಯರು ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಸಂಬಂಧ ಸರ್ಕಾರ ಮತ್ತು ಇಲಾಖೆ ವಿವಿಧ ತೆರನಾದ ತಂತ್ರಗಳ ಮೂಲಕ ನಿಯಂತ್ರಿಸಲು ಕ್ರಮವಹಿಸುತ್ತಿದೆ. ಅದರಲ್ಲಿ ಅಕ್ಕ ಪಡೆ, 112 ಸಹಾಯವಾಣಿ, ಮಹಿಳೆ ಮತ್ತು ಮಕ್ಕಳ ಸಹಾಯವಾಣಿ ಹೀಗೆ ಹಲವಾರು ಸಹಾಯವಾಣಿಗಳ ಮೂಲಕ ತುರ್ತ ಸೇವೆಗಳನ್ನು ಇಲಾಖೆಯು ನೀಡುತ್ತಿದೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಬರುವ ಬದಲು ಪೊಲೀಸರೇ ಸಾರ್ವಜನಿಕರ ಬಳಿ ಹೋಗಿ ಸೇವೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎನ್. ಚೇತನ್ ಕುಮಾರ್ ಮಾತನಾಡಿ, ಕಾವಲು ಸಮಿತಿಗಳ ಮೂಲಕ ಮಹಿಳೆ ಮತ್ತು ಮಕ್ಕಳ ಚಲನ ವಲನಗಳ ಮೇಲೆ ನಿಗಾ ಇಟ್ಟು, ಮಹಿಳೆ ಮತ್ತು ಮಕ್ಕಳು ಬಹಳ ದಿನಗಳ ನಂತರ ಆ ಪ್ರದೇಶಗಳಲ್ಲಿ ಕಂಡು ಬರದಿದ್ದರೆ ಪೊಲೀಸರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೆ ಎನ್ ಶಿವಕುಮಾರ ಮತನಾಡಿ, ಮಾನವ ಕಳ್ಳ ಸಾಗಾಣಿಕೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದು ವಿಷಾದನೀಯ ಸಂಗತಿಯಾಗಿದೆ. ವಿವಿಧ ತೆರನಾದ ಕಳ್ಳ ಸಾಗಾಣಿಕೆಗಳು ಕಂಡು ಬರುತ್ತವೆ. ಅವುಗಳಲ್ಲಿ ಮಾನವ ಕಳ್ಳ ಸಾಗಾಣಿಕೆಯು ಒಂದಾಗಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಕ್ಕಳು ಕಾಣೆಯಾದ ಪ್ರಕರಣಗಳು ಬಂದರೆ ತಕ್ಷಣ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ಉಪನಿರ್ದೇಶಕ ಮಲ್ಲಿಕಾಜುನ್, ಅಣ್ಣಪ್ಪ ಹೆಗಡೆ, ಸುಮಿತ್ರಾ ಡಿ.ಬಿ., ಅನಿಲ ಕಾಂಬಳೆ, ಶಿಲ್ಪಾ ದೇಸಾಯಿ ಇತರರಿದ್ದರು.
Laxmi News 24×7