ಬೆಳಗಾವಿ:ನಗರದಲ್ಲಿ ಪ್ರಯಾಣಿಕರಿಂದ ಮನಬಂದಂತೆ ದರ ವಸೂಲಿ ಮಾಡುವ ಆಟೋರಿಕ್ಷಾಗಳಿಗೆ ಕಡಿವಾಹಣ ಹಾಕಬೇಕು. ಮೀಟರ್ ಆಧಾರದಲ್ಲೇ ಎಲ್ಲ ಆಟೋಗಳು ಸಂಚರಿಸಬೇಕು ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ ರೋಷನ್‌ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಮುಂದಿನ 15 ದಿನಗಳೊಳಗೆ ನಗರದ ಎಲ್ಲಾ ಆಟೋರಿಕ್ಷಾಗಳು ಮೀಟರ ಅಳವಡಿಸಿಕೊಂಡು ನಿಗದಿತ ದರದಂತೆ ಸೇವೆ ನೀಡಬೇಕು.ಮೊದಲ 1.6 ಕಿಲೋಮೀಟರ್‌ಗೆ 37 ರೂ.ಹಾಗೂ ನಂತರ ಪ್ರತಿ ಕಿಲೋಮೀಟರ್‌ಗೆ 15 ರೂ. ದರವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಆದೇಶ ಪಾಲನೆ ಮಾಡದಿರುವ ಮತ್ತು ಮೀಟರ ಬಳಸದೆ ಸಂಚರಿಸುವ ಅಥವಾ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ಆಟೋರಿಕ್ಷಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ನಗರದಲ್ಲಿ ಹೊಸ ಆಟೋರಿಕ್ಷಾಗಳ ನೋಂದಣಿಗೆ ಅವಕಾಶ ನೀಡಬಾರದು.ನೋಂದಣಿ ಅವಧಿ ಮುಗಿದ ಹಾಗೂ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲದ ಆಟೋರಿಕ್ಷಾಗಳಿಗೆ ಮರು ನೋಂದಣಿ ನೀಡದಂತೆ ಆಟೋ ಸಂಘಗಳು ಮತ್ತು ಡೀಲರ್‌ಗಳೊಂದಿಗೆ ಸಭೆ ನಡೆಸಿ.ಹಲವು ವರ್ಷಗಳಿಂದ ನೋಂದಣಿ ನವೀಕರಿಸದೆ ಸಂಚರಿಸುತ್ತಿರುವ ಆಟೋರಿಕ್ಷಾಗಳನ್ನು ಗುರುತಿಸಿ, ಅವುಗಳನ್ನು ಗುಜರಿಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಬೇಕು. ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲು ಟ್ರಾಫಿಕ ಪೊಲೀಸರೊಂದಿಗೆ ಸಹಕರಿಸಬೇಕು. ಯಾವುದೇ ರೀತಿಯ ವಾಗ್ವಾದ ಅಥವಾ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.
ನಗರದಲ್ಲಿ ಬಿಳಿ ಬಣ್ಣದ ನೋಂದಣಿ ಫಲಕ ಹೊಂದಿರುವ ಬೈಕ್, ಕಾರು ಹಾಗೂ ಇತರ ಖಾಸಗಿ ವಾಹನಗಳು ವಾಣಿಜ್ಯ ಉದ್ದೇಶಕ್ಕೆ ಪ್ರಯಾಣಿಕರನ್ನು ಸಾಗಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಂಚಾರ ನಿಯಮ ಪಾಲನೆ ಮಾಡದಿರುವ ಮತ್ತು ನಿಯಮ ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದುಕೊಂಡು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಡಿ.
ಪ್ರೊಬೇಷನರಿ ಐಎಎಸ ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಸಾರಿಗೆ ಅಧಿಕಾರಿ ನಾಗೇಶ ಮುಂಡಾಸ ,ಆಟೋರಿಕ್ಷಾ ಸಂಘಗಳ ಪದಾಧಿಕಾರಿಗಳು ಇತರರಿದ್ದರು.
Laxmi News 24×7