ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ ಮೇಲೆ ಅಥಣಿ ವೃತ್ತದ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಥಣಿಯ ಕವಾಸಕಾನ ಗಲ್ಲಿಯ ನಿವಾಸಿ, ಲಾಡ್ಜ್ ಮ್ಯಾನೇಜರ್ ರುದ್ರಪ್ಪ ಗುರುಲಿಂಗಪ್ಪ ನಾವಲಗಿ (72) ಹಾಗೂ ಅಥಣಿ ತಾಲೂಕಿನ ಬೇವನೂರ ಗ್ರಾಮದ ನಿವಾಸಿ ಶ್ರೀನಿವಾಸ ಗೋರಕ ವಾಘಮೋರೆ (32) ಬಂಧಿತ ಆರೋಪಿಗಳು.
ಅಥಣಿ ಪಟ್ಟಣದ ಗಾಂಧಿ ಮಾರ್ಕೆಟ್‌ನಲ್ಲಿರುವ ವೆಂಕಟೇಶ್ವರ ಲಾಡ್ಜ್‌ನಲ್ಲಿ ಮಹಿಳೆಯರನ್ನು ಇಟ್ಟುಕೊಂಡು ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಥಣಿ ವೃತ್ತ ನಿರೀಕ್ಷಕರಾದ ಸಂತೋಷ ಡಿ. ಹಳ್ಳೂರ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಲಾಗಿದ್ದ ಮಹಿಳೆಯರನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಲಾಡ್ಜ್ ಮ್ಯಾನೇಜರ್ ರುದ್ರಪ್ಪ ಹಾಗೂ ಶ್ರೀನಿವಾಸ ಅವರನ್ನು ವಶಕ್ಕೆ ಪಡೆದಿದ್ದು ಈ ಪ್ರಕರಣ ಕುರಿತು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಕುರಿತಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7