Breaking News

ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಆದೇಶ – ಮಂಡ್ಯದ ರೈತರಿಂದ ಪ್ರತಿಭಟನೆ ಎಚ್ಚರಿಕೆ; ಪೊಲೀಸರು ಅಲರ್ಟ್

Spread the love

ಮಂಡ್ಯ: ಕಾವೇರಿ ಕೊಳ್ಳದ ರೈತರಿಗೆ ಮತ್ತೊಮ್ಮೆ ಆತಂಕ ಎದುರಾಗಿದೆ. ಮಳೆಯಿಲ್ಲದೇ ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಬರದ ಪರಿಸ್ಥಿತಿ ತಲೆದೋರಿದೆ. ಇದರ ನಡುವೆಯೂ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಮಂಡ್ಯದ ರೈತರಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ತಮಿಳುನಾಡಿಗೆ  ನೀರು ಹರಿಸುತ್ತಿರುವುದು ರೈತರ  ಕೆಂಗಣ್ಣಿಗೆ ಗುರಿಯಾಗಿದೆ. ಸಿಡಿದೆದ್ದಿರುವ ಮಂಡ್ಯ ಜಿಲ್ಲೆಯ ರೈತರು ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ರೈತ ಸಂಘಟನೆಗಳು ಹಾಗೂ ಹಿತಾರಕ್ಷಣಾ ಸಮಿತಿಗಳಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.

ರೈತರ ಪ್ರತಿಭಟನೆ ಹಿನ್ನೆಲೆ ಮಂಡ್ಯ ಜಿಲ್ಲಾ ಪೊಲೀಸ್ ಆಡಳಿತ ಸಂಪೂರ್ಣ ಎಚ್ಚೆತ್ತುಕೊಂಡಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಲಾಗಿದೆ.

ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಸೇರಿದಂತೆ ಎಲ್ಲಾ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಪ್ರತಿಭಟನೆ ನಡೆಯುವ ಸಂಭವವಿರುವ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಎಸ್‌ಪಿ ಶೋಭಾರಾಣಿ ಅವರು ಸ್ಥಳೀಯ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಒಟ್ಟಾರೆ ರೈತರು ತಮ್ಮ ಆಕ್ರೋಶವನ್ನು ಶಾಂತಿಯುತವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ತಮಿಳುನಾಡಿಗೆ ನೀರು ಹರಿಯುವುದು ಮುಂದುವರಿದರೆ ಮಂಡ್ಯದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಕೃಷ್ಣರಾಜ ಸಾಗರ ಜಲಾಶಯದಲ್ಲಿ  ಪ್ರಸ್ತುತ ಬಳಕೆಗಾಗಿ ಲಭ್ಯವಿರುವುದು ಕೇವಲ 12 ಟಿಎಂಸಿ ನೀರು ಮಾತ್ರ. ಆದೇಶದ ಪ್ರಕಾರ, ಮುಂದಿನ 15 ದಿನಗಳಲ್ಲಿ ತಮಿಳುನಾಡಿಗೆ 4.5 ಟಿಎಂಸಿ ನೀರನ್ನು ಹರಿಸಬೇಕಿದೆ. ಅಂದರೆ, ನಿತ್ಯ 3,500 ಕ್ಯೂಸೆಕ್ ನೀರನ್ನು ಬಿಡಲು ಸೂಚಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಶೇ.83ರಷ್ಟು ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯ 7 ತಾಲೂಕುಗಳು ಈಗಾಗಲೇ ಗಂಭೀರ ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಮಳೆ ಬಾರದಿದ್ದಲ್ಲಿ ಮುಂದೆ ಬೆಂಗಳೂರು ಸೇರಿದಂತೆ ಮಂಡ್ಯ ಮತ್ತು ಮೈಸೂರು ಭಾಗದಲ್ಲೂ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ನೀರಿನ ಗಂಭೀರ ಪರಿಸ್ಥಿತಿಯನ್ನು ಮನಗಂಡಿರುವ ರಾಜ್ಯ ಸರ್ಕಾರ, ರೈತರು ಹೊಸ ಬೆಳೆಗಳ ಬಿತ್ತನೆ ಮಾಡದಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಮನವಿ ಮಾಡಿದ್ದಾರೆ. ಒಂದು ಕಡೆ ರಾಜ್ಯದ ರೈತರಿಗೆ ನೀರಿನ ಸಂಕಷ್ಟವಿದ್ದರೆ, ಮತ್ತೊಂದೆಡೆ ತಮಿಳುನಾಡಿನ ಬೆಳೆಗೆ ನೀರು ಹರಿಸುವಂತೆ ನೀಡಿರುವ ಆದೇಶವು ಕರುನಾಡಿಗೆ ಮರಣ ಶಾಸನವಿದ್ದಂತೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಜಲಾಶಯದ ವಾಸ್ತವಿಕ ಸ್ಥಿತಿಯನ್ನು ಅರಿಯದೇ ಹೊರಡಿಸಿರುವ ಈ ಆದೇಶದ ವಿರುದ್ಧ ಮಂಡ್ಯದ ರೈತರು ಈಗ ಸಿಡಿದೆದ್ದಿದ್ದು, ಸರ್ಕಾರದ ವಿರುದ್ಧ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಮತ್ತೊಮ್ಮೆ ದೊಡ್ಡ ಮಟ್ಟದ ಹೋರಾಟ ಭುಗಿಲೆಳುವ ಎಲ್ಲಾ ಸಾಧ್ಯತೆಗಳಿವೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ