Breaking News

ಧಾರವಾಡ ಹೈಕೋರ್ಟ್‌ನಲ್ಲಿ ಹೊಸ ಮೈಲಿಗಲ್ಲು – ಮಹಿಳಾ ನ್ಯಾಯಮೂರ್ತಿಗಳಿರುವ ಏಳು ಪೀಠಗಳಿಂದ ಆ.1ರಂದು ವಿಶೇಷ ಕಲಾಪ

Spread the love

ಧಾರವಾಡ: ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ  ವಿಭಾಗೀಯ ಪೀಠದಲ್ಲಿ ಆ.1ರಂದು ಸಂಪೂರ್ಣವಾಗಿ ಮಹಿಳಾ ನ್ಯಾಯಮೂರ್ತಿಗಳನ್ನೊಳಗೊಂಡ ಏಳು ಪೀಠಗಳಿಂದ ವಿಶೇಷ ಕಲಾಪ ಕಾರ್ಯನಿರ್ವಹಿಸಲಿವೆ.

ನ್ಯಾಯಾಲಯಗಳ ಇತಿಹಾಸದಲ್ಲೇ ಅಪರೂಪದ ಈ ವಿಶೇಷ ಕಲಾಪವು ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಡೆಯಲಿದ್ದು, ನ್ಯಾಯಾಂಗ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ.

ಧಾರವಾಡ ವಕೀಲರ ಸಂಘದ ಮಹಿಳಾ ಪ್ರತಿನಿಧಿ ಸಂಜನಾ ಎಸ್. ಮುಧೋಳ್ ಅವರ ಮನವಿಯ ಮೇರೆಗೆ ಈ ವಿಶೇಷ ಮಹಿಳಾ ಪೀಠಗಳ ಕಲಾಪವನ್ನು ಆಯೋಜಿಸಲಾಗಿದೆ. ಆಗಸ್ಟ್ 1ರ ವಿಶೇಷ ಶನಿವಾರದ ಕಲಾಪದಲ್ಲಿ ಮೂರು ವಿಭಾಗೀಯ ಪೀಠಗಳು ಹಾಗೂ ನಾಲ್ಕು ಏಕಸದಸ್ಯ ಪೀಠಗಳು ಕಾರ್ಯನಿರ್ವಹಿಸಲಿವೆ.

ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಜಿ. ಶಾಂತಿ, ನ್ಯಾಯಮೂರ್ತಿ ಜ್ಯೋತಿ ಎಂ ಹಾಗೂ ನ್ಯಾಯಮೂರ್ತಿ ಪಿ. ಶ್ರೀ ಸುಧಾ, ನ್ಯಾಯಮೂರ್ತಿ ಲಲಿತಾ ಕನ್ನೇಗಂಟಿ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಒಳಗೊಂಡ ವಿಭಾಗೀಯ ಪೀಠಗಳು. ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ, ನ್ಯಾಯಮೂರ್ತಿ ತಾರಾ ವಿತಸ್ತ ಗಂಜು, ನ್ಯಾಯಮೂರ್ತಿ ಗೀತಾ ಕೆ.ಬಿ, ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ನೇತೃತ್ವದ ಏಕಸದಸ್ಯ ಪೀಠಗಳು ಕಾರ್ಯ ನಿರ್ವಹಿಸಲಿವೆ.

ಭಾರತದ ಸಂವಿಧಾನಾತ್ಮಕ ನ್ಯಾಯಾಲಯಗಳಲ್ಲಿ ಸಂಪೂರ್ಣ ಮಹಿಳಾ ನ್ಯಾಯಮೂರ್ತಿಗಳ ಪೀಠಗಳು ಅತ್ಯಂತ ಅಪರೂಪ. ಸುಪ್ರೀಂಕೋರ್ಟ್‌ನಲ್ಲಿ ಇದುವರೆಗೆ ಕೆಲವೇ ಬಾರಿ ಇಂತಹ ಪೀಠಗಳು ರಚನೆಯಾಗಿವೆ. 2013, 2018, 2022 ಮತ್ತು 2023ರಲ್ಲಿ ಮಾತ್ರ ಮಹಿಳಾ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠಗಳು ಕಾರ್ಯನಿರ್ವಹಿಸಿದ್ದವು.

ಹೈಕೋರ್ಟ್‌ಗಳ ಮಟ್ಟದಲ್ಲಿಯೂ ಇಂತಹ ಪೀಠಗಳು ವಿರಳವಾಗಿದ್ದು, 2022ರ ಮಹಿಳಾ ದಿನಾಚರಣೆಯಂದು ಕೇರಳ ಹೈಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಪೂರ್ಣ ಪೀಠ ರಚನೆಯಾಗಿತ್ತು. ಆ ಪೀಠದ ಸದಸ್ಯೆಯಾಗಿದ್ದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಈಗ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದು, ಧಾರವಾಡ ಪೀಠದ ಈ ಐತಿಹಾಸಿಕ ವಿಶೇಷ ಕಲಾಪದಲ್ಲೂ ಭಾಗವಹಿಸಲಿದ್ದಾರೆ.


Spread the love

About Laxminews 24x7

Check Also

ಸೋಪ್ ಆರ್ಡರ್ ಮಾಡಲು ಹೋಗಿ 2.97 ಲಕ್ಷ ಕಳೆದುಕೊಂಡ ವ್ಯಕ್ತಿ

Spread the loveಶಿವಮೊಗ್ಗ: ಸೋಪನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 2.97 ಲಕ್ಷ ರೂ. ಕಳೆದುಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ