ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮಗಳ ಕುರಿತು ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಮುಂದುವರಿಸಿರುವ ಮಧ್ಯೆಯೇ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ತಡರಾತ್ರಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಸಕಾರಾತ್ಮಕ ಸಲಹೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
ಧನ್ಯವಾದಗಳು ಗೆಳೆಯರೇ! ನಿನ್ನೆ ರಾತ್ರಿ ನಿಮ್ಮನ್ನೆಲ್ಲಾ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ನಾನು ಪೋಸ್ಟ್ ಮಾಡಿದ ವಿಡಿಯೋಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮ್ಮ ಸಕಾರಾತ್ಮಕ ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾವು ಇದೇ ರೀತಿ ಸಂಪರ್ಕದಲ್ಲಿರುತ್ತೇವೆ. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.
ನಿನ್ನೆಯ ವಿಡಿಯೋದಲ್ಲಿ ಹೇಳಿದ್ದೇನು..?
ಪ್ರಸ್ತುತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸತತ ಎರಡನೇ ದಿನವೂ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ವಿಡಿಯೋ ಸಂದೇಶದಲ್ಲಿ ಅವರು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ತರುವುದಾಗಿ ಭರವಸೆ ನೀಡಿದ್ದರು. ಇಂತಹ ಪ್ರಕರಣಗಳು ಸಣ್ಣ ವಿಷಯಗಳಲ್ಲ, ಇವು ಲಕ್ಷಾಂತರ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ಪ್ರಧಾನಿ ಪ್ರತಿಪಾದಿಸಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳನ್ನು ಅತ್ಯಂತ ನೋವಿನ ಸಂಗತಿ ಎಂದು ಕರೆದಿರುವ ಪ್ರಧಾನಿ ಮೋದಿ, ನೀಟ್ ವಿಚಾರದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ತಾವು ಇನ್ನೂ ಸಂಪೂರ್ಣ ತೃಪ್ತರಾಗಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಲು ತಕ್ಷಣವೇ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ನೀಟ್ ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಅಧಿಕಾರಿಗಳನ್ನು ಅವರು ಅಭಿನಂದಿಸಿದ್ದಾರೆ.
ಗುರುವಾರ ಪ್ರಧಾನಿ ಮೋದಿ ನೀಡಿದ ವಿಡಿಯೋ ಸಂದೇಶದ ಬೆನ್ನಲ್ಲೇ, ಶುಕ್ರವಾರ ರಾಷ್ಟ್ರ ರಾಜಧಾನಿಯ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಠಿಣ ತಿದ್ದುಪಡಿ ಮಸೂದೆಯ ಕರಡಿಗೆ ಅಂಕಿತ ಹಾಕಲಾಗಿದೆ. ಸಾರ್ವತ್ರಿಕ ಪರೀಕ್ಷೆ (ಅಕ್ರಮಗಳ ತಡೆ) ಕಾಯ್ದೆ 2024ರ ಬದಲಿಗೆ ಜಾರಿಗೆ ಬರಲಿರುವ ಈ ಹೊಸ ಮಸೂದೆಯನ್ನು ಮುಂಬರುವ ವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ಅಪರಾಧಿಗಳಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ಗರಿಷ್ಠ 10 ಕೋಟಿ ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆ ಇದರಲ್ಲಿದೆ.
ಮತ್ತೊಂದೆಡೆ, ಈ ತಿದ್ದುಪಡಿ ಮಸೂದೆಯ ನಡುವೆಯೂ ಸಿಜೆಪಿ ಮತ್ತು ವಿರೋಧ ಪಕ್ಷಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ತೀವ್ರ ಒತ್ತಾಯ ಹೇರುತ್ತಿವೆ. ಆದರೆ ಸಚಿವ ಪ್ರಧಾನ್ ರಾಜೀನಾಮೆ ನೀಡುವ ಸಾಧ್ಯತೆಗಳು ವಿರಳವಾಗಿದ್ದು, ಇಡೀ ಸಚಿವ ಸಂಪುಟವೇ ಅವರ ಬೆಂಬಲಕ್ಕೆ ನಿಂತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ
Laxmi News 24×7