ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಗಲಾಟೆ ಬಳಿಕ ಇಂದಿನ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಮಂಡಲಹಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಬಳಿಕ ಮಾತನಾಡಿದ ಎಸ್ಪಿ ಶ್ರೀನಿವಾಸ್ ಗೌಡ, ಇಂದು ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ನಾಳೆ ಸರ್ವೆ ಮುಂದುವರಿಸಲು ತೀರ್ಮಾನವಾದರೆ ಸಂಪೂರ್ಣ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.
ಗಲಾಟೆ ವೇಳೆ ಕರ್ತವ್ಯದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೂ ಹಲ್ಲೆ ನಡೆದಿದೆ. ಅಧಿಕಾರಿಗಳಿಂದ ದೂರು ಬಂದ ಬಳಿಕ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಯೋಜನೆ ಪರ ರೈತರೂ ಬೀದಿಗೆ:
ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಯೋಜನೆ ಪರವಾಗಿರುವ ರೈತರೂ ಪ್ರತಿಭಟನೆ ನಡೆಸಿದ್ದಾರೆ. ನಾವು ಸ್ವಯಂಪ್ರೇರಣೆಯಿಂದ ಜಮೀನು ನೀಡಲು ಒಪ್ಪಿದ್ದೇವೆ. ಆದ್ದರಿಂದ ಜೆಎಂಸಿ ಸರ್ವೆ ತಕ್ಷಣ ಮುಂದುವರಿಸಿ, ಪರಿಹಾರವನ್ನು ಶೀಘ್ರ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ಕೆಲವರು ರಾಜಕೀಯ ಉದ್ದೇಶದಿಂದ ಯೋಜನೆಗೆ ವಿರೋಧಿಸುತ್ತಿದ್ದಾರೆ. ಅವರ ಕಾರಣಕ್ಕೆ ಇಡೀ ಯೋಜನೆ ನಿಲ್ಲಬಾರದು. ಪೊಲೀಸ್ ಭದ್ರತೆಯಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.
ಒಂದೆಡೆ ಯೋಜನೆ ವಿರೋಧಿ ರೈತರು ಸರ್ವೆ ತಡೆದು ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಿದ್ದರೆ, ಮತ್ತೊಂದೆಡೆ ಯೋಜನೆ ಬೆಂಬಲಿಸುವ ರೈತರು ಸರ್ವೆ ಮುಂದುವರಿಸುವಂತೆ ಆಗ್ರಹಿಸುತ್ತಿದ್ದಾರೆ. ಇದರಿಂದ ಬಿಡದಿ ಟೌನ್‌ಶಿಪ್ ವಿವಾದ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
Laxmi News 24×7