Breaking News

ಮಳೆ ತೀವ್ರ ಕೊರತೆ – ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ವಿಜಯೇಂದ್ರ ಆಗ್ರಹ

Spread the love

ಬೀದರ್: ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆಯಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಆದ್ದರಿಂದ ಸರ್ಕಾರ ಅನ್ನದಾತರ ಕಷ್ಟಕ್ಕೆ ಸ್ಪಂದಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಅವರು ಆಗ್ರಹಿಸಿದರು.

ಬೀದರ್‌ನಲ್ಲಿ (Bidar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿದೆ. ಕಲ್ಯಾಣ ಕರ್ನಾಟದ ಭಾಗದಲ್ಲಿ 30 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಜನೀನಿನಲ್ಲಿ ಬಿತ್ತನೆ ಆಗಿಲ್ಲ. ಕಳೆದ ವಾರ ಸ್ವಲ್ಪ ಮಳೆ ಆಗಿತ್ತು. ಆ ಮಳೆಗೆ ಬಿತ್ತನೆ ಆಗಿತ್ತು. ಆದರೆ ತೊಗರಿ, ಉದ್ದು, ಸೂರ್ಯಕಾಂತಿ ಮೊಳಕೆ ಒಡೆಯುವ ಸ್ಥಿತಿಯಲ್ಲಿ ಇಲ್ಲ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಿಎಂಗೆ ಯಾರೂ ಸಾಟಿ ಇಲ್ಲ…
ಕಳೆದ ವಾರ ಸಿಎಂ ಮೊದಲಿಗೆ ಬೀದರ್‌ಗೆ ಬಂದಿದ್ದರು. ಬಸವಕಲ್ಯಾಣಕ್ಕೂ ಭೇಟಿ ನೀಡಿದ್ದ ಅವರು ಶಿವಲಿಂಗವನ್ನ ಕೈಯಲ್ಲಿ ಹಿಡಿದು ಫೋಟೊ ಶೂಟ್ ಮಾಡಿದ್ದಾರೆ. ಮಾರ್ಕೆಟಿಂಗ್‌ ವಿಚಾರದಲ್ಲಿ ಡಿ.ಕೆ ಶಿವಕುಮಾರ್  ಅವರಿಗೆ ಯಾರೂ ಸಾಟಿ ಇಲ್ಲ. ಕಳೆದ 3 ವರ್ಷ ಸಹ ಅಭಿವೃದ್ಧಿ ಕಾರ್ಯ ಆಗಿಲ್ಲ. ಶಾಸಕರಿಗೆ ಹಣ ನೀಡಲಿಲ್ಲ. ಬೆಂಗಳೂರು ಅಭಿವೃದ್ಧಿ ಆದರೆ ಮಾತ್ರ ರಾಜ್ಯದ ಅಭಿವೃದ್ಧಿ ಎಂದು ಹಿಂದಿನ ಸಿಎಂ ತಿಳಿದಿದ್ದರು. ಆದರೆ ಈಗಿನ ಸಿಎಂ ಸಹ ಬದಲಾಗಿಲ್ಲ ಎಂದರು.

ಪರಿಹಾರದ ಹಣ ಕೇವಲ ಜಲ್ಲಾಧಿಕಾರಿಗಳ ಅಕೌಂಟ್‍ನಲ್ಲಿ ಉಳಿಯಬಾರದು. ರೈತರಿಗೆ ಸಿಗಬೇಕು, ಹಿಂದಿನ ಸಿಎಂ ಕಪಟ ನಾಟಕವಾಡಿದರು. ಕೇಂದ್ರದಿಂದ ಬಂದ ಅನುದಾನ ಹೇಗೆ ದುರ್ಬಳಕೆ ಮಾಡಿದರು ಎಂಬುದನ್ನ ನೋಡಿದ್ದೇವೆ. ಕೇಂದ್ರದಿಂದ ಬರುವ ಅನುದಾನ ಜನರಿಗೆ ಸಿಗಬಾರದು ಎಂದು ಷಡ್ಯಂತ್ರವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ರಿಯಲ್ ಎಸ್ಟೇಟ್ ಆದ್ಯತೆ ಅಲ್ಲ..
ರಾಜ್ಯದ ಸಿಎಂ ಆದವರಿಗೆ ರೈತರು ಆದ್ಯತೆ ಹೊರತು ರಿಯಲ್ ಎಸ್ಟೇಟ್  ಅಲ್ಲ. ರಾಜ್ಯದ ನೂತನ ಸಿಎಂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದು ಬಯಸಿದ್ದರು. ಬಿಡದಿಯಲ್ಲೂ ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ನೀಡುವ ಆದ್ಯತೆಯನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಲಿ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗಬೇಕು. ನೀರಾವರಿ ಸಮಸ್ಯೆಗೆ ಉತ್ತರ ಸಿಗಬೇಕಿದೆ ಎಂದರು.

ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು, ಅನುಭವ ಮಂಟಪದ ಅಭಿವೃದ್ಧಿಗೆ ಆಸಕ್ತಿ ವಹಿಸಿದ್ದರು. ಜಾಗತಿಕ ಮಟ್ಟದ ಕೇಂದ್ರ ಮಾಡಲು ಮುಂದಾಗಿದ್ದರು. ಸುಮಾರು 500 ಕೋಟಿ ಯೋಜನಾ ವರದಿ ಮಾಡಿ 200 ಕೋಟಿ ಬಿಡುಗಡೆ ಮಾಡಿದ್ದರು. ಬಸವಕಲ್ಯಾಣದ ಅಭಿವೃದ್ಧಿ ಸಂಬಂಧ ಸಿಎಂ ಹೇಳಿಕೆ ಕೇವಲ ಹೇಳಿಕೆಗೆ ಸೀಮಿತವಾಗದೆ ಮಾತು ನೀಡಿದಂತೆ ಅನುಷ್ಠಾನವಾಗಲಿ ಎಂದು ಒತ್ತಾಯಿಸಿದರು. ʼ

ಪೂರ್ಣ ಸಚಿವ ಸಂಪುಟ ಸಹ ಇಲ್ಲ
ಭೀಕರ ಬರ ಬಂದಿರುವಾಗಲೇ ರಾಜ್ಯ ಸರ್ಕಾರಕ್ಕೆ ಪೂರ್ಣ ಸಚಿವ ಸಂಪುಟ ಸಹ ಇಲ್ಲ. ಈಗ ಮತ್ತೆ ಶಾಸಕರು ದೆಹಲಿಗೆ ಹೋಗಿ ಬೀಡು ಬಿಡುತ್ತಿದ್ದಾರೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಬಂದಿದ್ದಾರೆ. ಮತ್ತೆ ಸಚಿವಗಿರಿಗೆ ಲಾಭಿ ಆರಂಭವಾಗಲಿದೆ ಎಂದು ವ್ಯಂಗವಾಡಿದರು.

ಪಿಆರ್‌ಸಿ ದೇಶದ್ರೋಹದ ಕೆಲಸ..
ರಾಜ್ಯದಲ್ಲಿ ಎಸ್‍ಐಆರ್‌ ನಡೆತ್ತಿದೆ. ಹಿಂದೆ ಇದೇ ಕಾಂಗ್ರೆಸ ಸರ್ಕಾರ ಎಸ್‌ಐಆರ್ ವಿರೋಧಿಸಿತ್ತು. ಆದರೆ ಈಗ ಅಧಿಕಾರಿಗಳನ್ನು ದುರ್ಬಳಕೆ ಮಾಡಿ ಅವರ ಮೇಲೆ ಒತ್ತಡ ಹೇರಿ ಅಕ್ರಮ ವಲಸಿಗರನ್ನು ಮತಪಟ್ಟಿಗೆ ಸೇರಿಸಲು ರಾಜ್ಯಾದಾದ್ಯಂತ ಕೆಲಸ ನಡೆಯುತ್ತಿದೆ. ಮತ್ತೊಂದು ಕಡೆ ಅಕ್ರಮ ವಲಸಿಗರಿಗೆ ಪಿಆರ್‌ಸಿ (ಶಾಶ್ವತ ನಿವಾಸ ಪ್ರಮಾಣ ಪತ್ರ) ನೀಡುವ ಸಂಚು ಮಾಡಲಾಗುತ್ತಿದೆ. ಪಿಆರ್‍ಸಿ ನೀಡುತ್ತಿರುವುದು ದೇಶದ್ರೋಹದ ಕೆಲಸ. ಸದುದ್ದೇಶದಿಂದ ಮತಪಟ್ಟಿ ಪರಿಷ್ಕರಣೆ ನಡೆಯಬಾರದು ಎಂದು ಸರ್ಕಾರ ಇದನ್ನೆಲ್ಲ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಜಾಗೃತಿ ಮಾಡಿಸುತ್ತಿದೆ ಎಂದು ವಿವರಿಸಿದರು. ಅಲ್ಲದೇ ಬೀದರ್‌ನಲ್ಲೂ ಎಸ್‍ಐಆರ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಟ್ಟಾಗಿ ಒಂದಾಗಿ ಸಂಘಟನೆ ಕೆಲಸ ಮಾಡುತ್ತಿದ್ದೇವೆ ಎಂದರು.

ಹತ್ತಾರು ಬಾರಿ ಶಾಸಕರ ಸಭೆ, ಮಂಡಲಾಧ್ಯಕ್ಷರ, ಜಿಲ್ಲಾಧ್ಯಕ್ಷರ ಸಭೆ ಮಾಡಿದ್ದೇವೆ. ಸಂಘಟನೆ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಉಸ್ತುವಾರಿ ಇದ್ದಾರೆ. ಯಾವುದರಲ್ಲೂ ಹಿಂದೆ ಬಿದ್ದಿಲ್ಲ ಎಂದರು.

ಬೀದರ್‍ನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣಗಳ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅವರು ಸರಿಯಾದ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು. ಅಲ್ಲದೇ ಕೆಲವು ಜಿಲ್ಲೆಗಳಲ್ಲಿ ಸಂಘಟನಾತ್ಮಕ ಸಮಸ್ಯೆ ಇವೆ. ಇನ್ನು ಮೇಲೆ ಸಂಘಟನೆಗಾಗಿ ಕೆಲಸ ಮಾಡಿ ಎಂದು ಹೇಳಿದ್ದೇನೆ. ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು.

ಹಾಲಿನ ಪ್ರೋತ್ಸಾಹಧನ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದು. ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ ಧನ ಕೊಡುತ್ತಿಲ್ಲ. ಇರೋ ಐದು ರೂಪಾಯಿ ಕೊಡಲಿ ಎಂದರು. ದಸರಾದಲ್ಲಿ ಕಂಬಳ ಬೇಡ ಎಂದು ಸಂಸದರ ಹಾಗೂ ಜನರ ಆಗ್ರಹವಿದೆ ಎಂದು ನುಡಿದರು.


Spread the love

About Laxminews 24x7

Check Also

ಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆ

Spread the loveರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಗಲಾಟೆ ಬಳಿಕ ಇಂದಿನ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ