Breaking News

3 ಮಕ್ಕಳ ತಾಯಿಯೊಂದಿಗಿನ ಲಿವ್-ಇನ್ ಸಂಬಂಧವೇ ಜಿಮ್ ಟ್ರೇನರ್‌ ಸಾವಿಗೆ ಕಾರಣವಾಯ್ತಾ?

Spread the love

ಚಿಕ್ಕಬಳ್ಳಾಪುರ: ಬೆಂಗಳೂರಿನ ಜಿಮ್ ಟ್ರೇನರ್  ದೇವಿಪ್ರಸಾದ್ ಸಾವಿನ ಪ್ರಕರಣವನ್ನು ಆರಂಭದಲ್ಲಿ ರಸ್ತೆ ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಇದು ಅಪಘಾತವಲ್ಲ, ಕೊಲೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ.

30 ವರ್ಷದ ದೇವಿಪ್ರಸಾದ್ ಬೆಂಗಳೂರಿನ ನಾರಾಯಣಪುರ ನಿವಾಸಿಯಾಗಿದ್ದು, ಪ್ರತಿಷ್ಠಿತ ಜಿಮ್‌ನಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಅನೇಕ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಅವರು, ವೃತ್ತಿಪರ ಬೈಕ್ ರೈಡರ್ ಕೂಡ ಆಗಿದ್ದರು.

ಮೇ 8ರಂದು ಮಧ್ಯರಾತ್ರಿ ದೇವಿಪ್ರಸಾದ್ ತನ್ನ ಸಂಬಂಧಿ ವಿಕ್ಕಿ ಹಾಗೂ ಸ್ನೇಹಿತ ಜೋಸ್ವಾ ಜೋಸೆಫ್ ಜೊತೆ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-44 ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಕಡೆ ರೈಡ್‌ಗೆ ತೆರಳಿದ್ದರು.

ಮಾರ್ಗ ಮಧ್ಯೆ ಚಿಕ್ಕಬಳ್ಳಾಪುರ ತಾಲೂಕಿನ ಸೆಟ್‌ದಿನ್ನೆ ಬಳಿ ದೇವಿಪ್ರಸಾದ್ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಈ ಅಪಘಾತದಲ್ಲಿ ದೇವಿಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಆದರೆ ಈಗ ದೇವಿಪ್ರಸಾದ್ ತಂದೆ ಬಾಬು ನಟರಾಜ್, ಇದು ಅಪಘಾತ ಅಲ್ಲ. ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಎಸ್‌ಪಿಗೆ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಕುಟುಂಬದ ಆರೋಪದ ಪ್ರಕಾರ, ದೇವಿಪ್ರಸಾದ್ ಜೊತೆ ಬಂದಿದ್ದ ಸಂಬಂಧಿ ವಿಕ್ಕಿ ಹಾಗೂ ಸ್ನೇಹಿತ ಜೋಸ್ವಾ ಜೋಸೆಫ್ ಮೇಲೆ ಅನುಮಾನವಿದೆ. ಇಬ್ಬರೂ ಮೊದಲಿಗೆ ಮುಂದೆ ಹೋಗಿದ್ದೆವು. ಬಳಿಕ ವಾಪಸ್ ಬಂದು ನೋಡಿದಾಗ ದೇವಿಪ್ರಸಾದ್ ಅಪಘಾತದಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಇದರ ಜೊತೆಗೆ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ಜಿಮ್‌ಗೆ ಬರುತ್ತಿದ್ದ ಉದ್ಯಮಿ ಹಾಗೂ ಮಾಡೆಲ್ ಆಗಿರುವ ಮೂವರು ಮಕ್ಕಳ ತಾಯಿಯೊಂದಿಗೆ ದೇವಿಪ್ರಸಾದ್‌ಗೆ ಆಪ್ತ ಸಂಬಂಧ ಇತ್ತು ಎನ್ನಲಾಗಿದೆ. ಇಬ್ಬರೂ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎಂದು ಕುಟುಂಬ ಆರೋಪಿಸಿದೆ.

ಅವರಿಬ್ಬರ ಖಾಸಗಿ ವಿಡಿಯೋಗಳು ದೇವಿಪ್ರಸಾದ್ ಮೊಬೈಲ್‌ನಲ್ಲಿ ಇದ್ದವು. ಇದೇ ವಿಚಾರಕ್ಕೆ ಆ ಮಹಿಳೆ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದು ಎಂಬ ಅನುಮಾನವನ್ನು ಕುಟುಂಬ ವ್ಯಕ್ತಪಡಿಸಿದೆ. ಅಲ್ಲದೆ, ಸಂಬಂಧಿ ವಿಕ್ಕಿ ದೇವಿಪ್ರಸಾದ್ ಮನೆಯಲ್ಲಿ ಇದ್ದ ಕೆಲ ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಸದ್ಯ ದೇವಿಪ್ರಸಾದ್ ಸಾವು ಅಪಘಾತವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿದ್ದು, ಪ್ರಕರಣದ ಸಮಗ್ರ ತನಿಖೆಗೆ ಕುಟುಂಬ ಒತ್ತಾಯಿಸಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಎಸ್‌ಐಆರ್ ಕಾರ್ಯಕ್ಕೆ ನೆಟ್‌ವರ್ಕ್ ಸಮಸ್ಯೆ – ಮೊಬೈಲ್ ಹಿಡಿದು ಬೆಟ್ಟ ಏರಿದ ಬಿಎಲ್‌ಒಗಳು

Spread the loveರಾಯಚೂರು: ಲಿಂಗಸುಗೂರು  ತಾಲೂಕಿನಲ್ಲಿ ಎಸ್‌ಐಆರ್‌‌ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಒಗಳು ಮೊಬೈಲ್‌ಗೆ ನೆಟ್‌ವರ್ಕ್ ಇಲ್ಲದೇ ಪರದಾಡಿದ್ದಾರೆ. ನೆಟ್‌ವರ್ಕ್‌ಗಾಗಿ ಮೊಬೈಲ್‌ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ