Breaking News

ಯಾವ ಆಣೆ ಪ್ರಮಾಣ, ಎಲ್ಲಿಗೆ ಕರೆದುಕೊಂಡು ಹೋಗ್ತಾರೆ – ಬಾಲಕೃಷ್ಣ ವಿರುದ್ಧ ಹರಿಹಾಯ್ದ ಹೆಚ್‌ಡಿಕೆ

Spread the love

ಮಂಡ್ಯ: ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲೆಸೆದ ಶಾಸಕ ಬಾಲಕೃಷ್ಣ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಯಾವ ಆಣೆ ಪ್ರಮಾಣ, ಎಲ್ಲಿಗೆ ಕರೆದುಕೊಂಡು ಹೋಗ್ತಾರೆ? ನನಗೆ ಇರುವ ದೇವರ ಭಕ್ತಿಯನ್ನು ಅವರಿಂದ ಕಲಿಯಬೇಕಿಲ್ಲ. ಅವರು ಪಾಪ ನಂಬಿಕೊಂಡಿದ್ದಾರೆ ನಂಬಲಿ. ನಾನು ರೈತರ ಪರ ಇದ್ದಿದ್ದಕ್ಕಾಗಿಯೇ ಸುಮ್ಮನೆ ಆದೆ. ಇಲ್ಲದಿದ್ದರೆ 2ನೇ ಬಾರಿ ಸಿಎಂ ಆದಾಗ ಅದನ್ನು ಮಾಡಬಹುದಿತ್ತು. ರೈತರಿಗೆ ತೊಂದರೆ ಕೊಡಬೇಕು ಎಂದಿದ್ದರೆ ನಾನು ಆಗಲೇ ಮಾಡುತ್ತಿದ್ದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್. ಸಿಎಂ ಡಿ.ಕೆ ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ. 3 ಎಕರೆ ಇದ್ದ ಪಿತ್ರಾರ್ಜಿತ ಆಸ್ತಿ 1400ಕೋಟಿ ರೂ. ಹೇಗಾಯ್ತು? ಮೋದಿಯವ್ರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೋ, ಇಲ್ವೋ ನನಗೆ ಗೊತ್ತಿಲ್ಲ. ಮೋದಿಯವರು ಗುಜರಾತ್‌ನಲ್ಲಿ ಹಲವಾರು ಟೌನ್‌ಶಿಪ್ ಮಾಡಿದ್ದಾರೆ. ಅವರು ಟೌನ್‌ಶಿಪ್ ಮಾಡಿದ್ದ ಜಾಗ ಯಾವುದು? ಇವ್ರು ಮಾಡ್ತಿರುವ ಜಾಗ ಯಾವ್ದು ಅದೇ ಪ್ರಶ್ನೆ. ಟೌನ್‌ಶಿಪ್ ಮಾಡಲು ನನ್ನ ಅಭ್ಯಂತರ ಇಲ್ಲ. ಈ ಹಿಂದೆ ಪ್ರಾಧಿಕಾರ ಮಾಡಿದ್ದರು. ಅದಕ್ಕೆ ಡಿಕೆಶಿ ಅಧ್ಯಕ್ಷರಾಗಿದ್ರು, ಏನಾಯ್ತು ಅದು ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು-ಮೈಸೂರು ರಸ್ತೆಯಲ್ಲಿ 1.75ಲಕ್ಷ ರೂ. ಎಕರೆ ಭೂಮಿಯನ್ನು ರಸ್ತೆಗೆ ಮತ್ತು ಟೌನ್‌ಶಿಪ್ ಮಾಡಲು ವಶಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ರು. ಕಳೆದ 30ವರ್ಷಗಳಲ್ಲಿ ಏನಾಯ್ತು ಆ ಪ್ರಾಜೆಕ್ಟ್? ಕುಮಾರಸ್ವಾಮಿ ಕೂಸು ಎಂದು ಬಿಡದಿ ಟೌನ್‌ಶಿಪ್ ಮಾಡಲು ತರಾತುರಿಯಲ್ಲಿ ಹೊರಟಿದ್ದಾರೆ. ಅವತ್ತು ಇದೇ ಕಾಂಗ್ರೆಸ್ ಹೆಚ್‌.ಕೆ ಪಾಟೀಲರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ಎಂದು ಮಾಡಿಕೊಂಡಿದ್ರು. ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ 40% ಸ್ಕೀಮ್ ಬಂದಿದ್ದು 2006ರಲ್ಲಿ, ಅದು ನನ್ನ ಮುಖ್ಯಮಂತ್ರಿ ಅವಧಿಯಲ್ಲಿ. ಕೇವಲ ಬಿಡದಿ ವಿಚಾರಕ್ಕೆ ತಂದ ಯೋಜನೆಯಲ್ಲ ಅದು. ಇಡೀ ರಾಜ್ಯದಲ್ಲಿ ರೈತರ ಭೂಮಿ ತೆಗೆದುಕೊಂಡಾಗ ಅವರಿಗೆ 40% ಅಭಿವೃದ್ಧಿಪಡಿಸಿದ ಭೂಮಿ ಕೊಡುವ ಯೋಜನೆಯನ್ನು ತಂದಿದ್ದೇ ನಾನು. ಇವತ್ತು ರಿಯಲ್ ಎಸ್ಟೇಟ್ ದಂಧೆ ಮಾಡಲು ಹೋಗ್ತಾ ಇದ್ದಾರೆ. ಹೊಸಕೆರೆಹಳ್ಳಿ ಬಳಿ ನೈಸ್ ಕಂಪನಿಗಾಗಿ ತೆಗೆದುಕೊಂಡಿದ್ದನ್ನಾ ಎನ್‌ಓಸಿ ಯಾರಿಗೆ ಕೊಟ್ರು? ಇವರೇನು ಬಡವರಿಗೆ ಕೊಟ್ಟಿದ್ದಾರಾ? ನೈಸ್ ರಸ್ತೆಯ ಬಿಲ್ಡಿಂಗ್‌ಗಳಿಗೆ ಸರ್ಕಾರದಿಂದ ರಸ್ತೆ ಮಾಡಲು ಹೊರಟಿದ್ದಾರೆ. ಪುರಾಣ ಹೇಳುತ್ತಾ ಹೋದರೆ ಇವರದ್ದು ಪುಟಗಟ್ಟಲೆ ಹೇಳಬಹುದು ಎಂದು ವಾಗ್ದಾಳಿ ನಡೆಸಿದರು.

ನನ್ನ 46 ಎಕರೆ ಜಮೀನನ್ನು ಕಷ್ಟ ಪಟ್ಟು ಸಂಪಾದನೆ ಮಾಡಿದ್ದೇನೆ. ನಿಮ್ಮ ರೀತಿ ಮಾಡಿದ್ದಲ್ಲ. 1400 ಕೋಟಿ ರೂ. ಈಗ ತೋರಿಸುತ್ತಾ ಇದ್ದೀರಾ? ನಾನು ರಾಜಕೀಯಕ್ಕೆ ಬರುವ ಮುನ್ನ ಮೈಸೂರಲ್ಲಿ ಹಂಚಿಕೆದಾರನಾಗಿ ಕೆಲಸ ಮಾಡಿದ್ದೆ. ಕನ್ನಡ ಚಿತ್ರರಂಗಕ್ಕೆ 4 ಲಕ್ಷ ರೂ. ಕೊಡ್ತಾ ಇದ್ರು. ಅದನ್ನು 10, 15 ಲಕ್ಷ ರೂ.ಗೆ ಏರಿಕೆ ಮಾಡಿದೆ. ಅಲ್ಲಿಂದ ಸಂಪಾದನೆ ಮಾಡಿದ ಹಣದಲ್ಲಿ ಜಮೀನು ತಗೊಂಡಿದ್ದೀನಿ. ನಾನು ಯಾವನನ್ನೋ ಕಿಡ್ನ್ಯಾಪ್ ಮಾಡಿ ಸಂಪಾದನೆ ಮಾಡಿದ ಭೂಮಿ‌ ಅದಲ್ಲ ಎಂದಿದ್ದಾರೆ.

ಹೊಸ ಸಿಎಂ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದಾಗಿ ಹೇಳಿದ್ದಾರೆ. ಮೊದಲು 5ಸಾವಿರ ಕೋಟಿ ಏನಾಯ್ತು ಎಂದು ಜನತೆ ಮುಂದೆ ಹೇಳಿ. ಹಿಂದಿನ ಮುಖ್ಯಮಂತ್ರಿಗಳು ಹೇಳಿಲ್ಲ. ಈಗೀನ ಸಿಎಂ ಆದ್ರೂ ಸತ್ಯಾಸತ್ಯತೆ ಹೇಳಲಿ. ಕಚೇರಿ ಒಳಗೆ ಲಂಚ ತೆಗೆದುಕೊಳ್ಳಬೇಡಿ ಎಂದು ಸಿಎಂ ಹೇಳಿದ್ದಾರೆ ಅಂತ ಪತ್ರಿಕೆಯಲ್ಲಿ ಓದಿದೆ. ಕಛೇರಿ ಒಳಗೆ ದುಡ್ಡು ತೆಗೆದುಕೊಳ್ಳಬೇಡಿ, ಹೊರಗಡೆ ದುಡ್ಡು ತಗೋಳಿ ಅಂತಾನಾ ಅದರ ಅರ್ಥ? ಈ ರೀತಿಯ ಬೆಳವಣಿಗೆಗಳು ಸಿಎಂ ಕಚೇರಿಯಿಂದಲೇ ನಡೆಯಲಿ. ಅಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಯಾರು ನೋಡ್ತಾರೆ, ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ