ಬೆಳಗಾವಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಪುರುಷರಿಗೆ ಆಧ್ಯತೆ ನೀಡಲಾಗಿದ್ದು, ಕೈ ಪಾಳೆಯದಲ್ಲಿರುವ ಮಹಿಳಾ ಶಾಸಕರಿಗೂ ಮಂತ್ರಿಯಾಗುವ ಸೌಭಾಗ್ಯ ದೊರೆಯದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು…ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ ಹದಿನಾಲ್ಕು ಜನರ ಇಡೀ ಮಂತ್ರಿಮಂಡಲದಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕರಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ. ಪ್ರಮಾಣ ವಚನ ಸ್ವೀಕಾರ ಮಾಡುವವರೆಲ್ಲರೂ ಪುರುಷರಾಗಿದ್ದಾರೆ. ವಿವಿಧ ಜಾತಿ, ಸಮುದಾಯ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ, ಒಬ್ಬ ಮಹಿಳಾ ಶಾಸಕಿಯೂ ಸಂಪುಟದಲ್ಲಿ ಸ್ಥಾನ ಪಡೆಯದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಚರ್ಚೆಯಲ್ಲಿದ್ದ ಮಹಿಳಾ ನಾಯಕಿಯರು: ಮೊದಲ ಹಂತದ ಸಂಪುಟ ರಚನೆಗೂ ಮುನ್ನ ಹಲವು ಮಹಿಳಾ ಶಾಸಕರ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬಂದಿದ್ದವು. ಮಹಿಳೆಯರ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ಮುಖಂಡರಾಗಿರುವ ಕೆ.ಹೆಚ್.ಮುನಿಯಪ್ಪನವರ ಪುತ್ರಿ ರೂಪಕಲಾ ಶಶಿಧರ್, ಹಿರಿಯ ನಾಯಕಿ ಮೋಟಮ್ಮನವರ ಪುತ್ರಿ ನಯನಾ ಮೋಟಮ್ಮ ಮತ್ತು ಕನೀಜ್ ಫಾತೀಮಾ ಇದ್ದಾರೆ. ಇದಲ್ಲದೆ ವಿಧಾನ ಪರಿಷತ್ ಸದಸ್ಯೆಯಾಗಿ ಚಿತ್ರನಟಿ ಉಮಾಶ್ರೀ, ಡಾ.ಆರತಿ ಕೃಷ್ಣ, ಬಲ್ಕೀಸ್ ಬಾನು, ಪಕ್ಷೇತರ ಶಾಸಕಿಯಾಗಿ ಗೆದ್ದು ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರಿ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಸಹ ಇದ್ದಾರೆ. ಆದರೆ ಈಗ ಕಾಂಗ್ರೆಸ್ ಪಾಳೆಯಲ್ಲಿ ಮೊದಲ ಪಟ್ಟಯಲ್ಲಿ ಮಹಿಳೆಯರಿಗೆ ಅಧ್ಯತೆ ನೀಡದಿರುವ ಈ ಎಲ್ಲ ಬೆಳವಣಿಗೆ ನೋಡಿ ಮಹಿಳಾ ನಾಯಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ ಎಂಬಂತೆ ಕಾಂಗ್ರೆಸ್ ಪಕ್ಷದಲ್ಲಿ ಭಾಸವಾಗುತ್ತಿದೆ.
ಸಮಾಧಾನ ತರಿಸಿದ 2ನೇ ಪಟ್ಟಿ: ಕಾಂಗ್ರೆಸ್ ಪಕ್ಷದಲ್ಲಿ ಐವರು ವಿಧಾನಸಭೆ ಸದಸ್ಯರು, ಮೂವರು ವಿಧಾನ ಪರಿಷತ್ ಸದಸ್ಯರಿದಂತೆ ಒಟ್ಟು 8 ಮಹಿಳಾ ನಾಯಕಿಯರಿದ್ದಾರೆ. ಕೈ ಪಕ್ಷದಲ್ಲಿ ಇಷ್ಟು ಜನ ಮಹಿಳಾ ಶಾಸಕರಿದ್ದರೂ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಯಾವ ಮಹಿಳಾ ಶಾಸಕರಿಗೂ ಅವಕಾಶ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದ್ದರೂ ಸದ್ಯದ ಸ್ಥತಿಯಲ್ಲಿ ಅವರ ಹೆಸರಿಲ್ಲ. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ಗೆ ಎರಡನೇ ಪಟ್ಟಿಯಲ್ಲಿ ಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಹೊರಬರವ 2ನೇ ಪಟ್ಟಿಯಲ್ಲಿ ನಮ್ಮದು…ನಿಮ್ಮದು.. ಹೆಸರು ಬರಬಹುದೆಂದು ಮಹಿಳಾ ಶಾಸಕಿಯರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಪಡಿಸಿದ್ದಾದರೂ, ಈ 2 ನೇ ಪಟ್ಟಿಯಿಂದ ಕಾಂಗ್ರೆಸನಲ್ಲಿ ಅಲ್ಲೋಲ್ಲ.. ಕಲ್ಲೋಲ… ಕೂಡಾ ಸೃಷ್ಠಿಸಬಹುದಾಗಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಲಕ್ಷ್ಮೀ ಅಸಮಾಧಾನ: ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಾರಿ ಸಹ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಅದರಲ್ಲೂ ಡಿಕೆ ಶಿವಕುಮಾರ್ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣದಿಂದ ಅವರಿಗೆ ಖಚಿತವಾಗಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇತ್ತು. ಆದರೆ ಮೂಲಗಳ ಪ್ರಕಾರ, ಅವರಿಗೆ ಸಚಿವ ಸ್ಥಾನ ನೀಡಲ್ಲ ಎಂಬ ಕಾರಣಕ್ಕೆ ಅವರಿಗೆ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ 20 ಸಚಿವ ಸ್ಥಾನಗಳು ಖಾಲಿ: ಪ್ರಸ್ತುತ ಮುಖ್ಯಮಂತ್ರಿ ಸೇರಿದಂತೆ 14 ಸದಸ್ಯರ ಮೊದಲ ಹಂತದ ಸಂಪುಟ ರಚನೆಯಾಗಿದ್ದು, ಇನ್ನೂ ಸುಮಾರು 20 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಓಂದು ವೇಳೆ ಎರಡನೇಯ ಪಟ್ಟಿಯಲ್ಲೂ ಕಾಂಗ್ರೆಸ್ ಶಾಸಕಿಯರಿಗೆ ಸಚಿವ ಸ್ಥಾನ ಸಿಗದೇ ಹೋದರೆ ಡಿಕೆ ಸರ್ಕಾರ ಸುಸುತ್ರವಾಗಿ ನಡೆಯುವುದು ತೀರಾ ಕಷ್ಟಕರವಾಗಲಿದೆ ಎಂದು ಹಿರಿಯ ರಾಜಕೀಯ ತಜ್ಞರು ತಮ್ಮ ಲೆಕ್ಕಾಚಾರ ತಿಳಿಸಿದ್ದಾರೆ.
ʻಕೈʼ ಮಹಿಳಾ ಶಾಸಕರಲ್ಲಿ ನಿರಾಶೆ ಮೂಡಿಸಿದ 1ನೇ ಪಟ್ಟಿ: ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತರಲಾದ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳಾ ಕೇಂದ್ರಿತ ಯೋಜನೆಗಳೆ ಆಗಿವೆ. ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ”ಗೃಹಲಕ್ಷ್ಮಿ” ಗ್ಯಾರಂಟಿ ಯೋಜನೆ ಮತ್ತು ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ”ಶಕ್ತಿ” ಗ್ಯಾರಂಟಿ ಯೋಜನೆ ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಕಾರ್ಯಕ್ರಮಗಲಾಗಿವೆ. ಆದರೆ ಡಿಕೆಶಿ ನೇತೃತ್ವದ 13 ಜನ ಸಚಿವರ ಹೊಸ ಮಂತ್ರಿಮಂಡಲದಲ್ಲಿ 8 ಜನ ಶಾಸಕರಿರುವರಲ್ಲಿ ಯಾವ ಮಹಿಳಾ ಶಾಸಕರಿಗೂ ಮಂತ್ರಿಯಾಗುವ ಸೌಭಾಗ್ಯ ದೊರೆಯದಿರುವುದು ಮಹಿಳಾ ಶಾಸಕರಲ್ಲಿ ನಿರಾಶೆ ಮೂಡಿಸಿರುವುದಂತೂ ಸುಳ್ಳಲ್ಲ. ಒಟ್ಟಾರೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಹಿಳಾ ನಾಯಕರಿಗೆ ಎಷ್ಟು ಸ್ಥಾನ ದೊರೆಯುತ್ತದೆ ಎಂಬುದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.
Laxmi News 24×7