ಮುಂಡಗೋಡ: ಮುಂಡಗೋಡ ಪಟ್ಟಣದ ಹೃದಯಭಾಗದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯನ್ನು ಗುರಿಯಾಗಿಸಿಕೊಂಡ ಖದೀಮರು, ಬೆಲೆಬಾಳುವ ತಾಮ್ರದ ಕೇಬಲ್ ಕಳವು ಮಾಡಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಂಡಗೋಡದ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ (BSNL) ಕಚೇರಿಯ ಆವರಣದಲ್ಲಿ ಈ ಕಳ್ಳತನ ನಡೆದಿದೆ. ಕಳೆದ ಮಾರ್ಚ್ 18ರ ರಾತ್ರಿ 8 ಗಂಟೆಯಿಂದ ಮಾರ್ಚ್ 19ರ ಮುಂಜಾನೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಚೇರಿಯ ದೂರವಾಣಿ ವಿನಿಮಯ ಕೇಂದ್ರದಿಂದ (Telephone Exchange) ಪವರ್ ಪ್ಲಾಂಟ್ ಬ್ಯಾಟರಿಗೆ ಸಂಪರ್ಕ ಕಲ್ಪಿಸುವ ಸುಮಾರು 70 ಮೀಟರ್ ಉದ್ದದ (300 ಚದರ ಮಿ.ಮೀ) ತಾಮ್ರದ ಕೇಬಲ್ ಅನ್ನು ಕಳ್ಳತನ ಮಾಡಲಾಗಿದೆ. ಕಳುವಾದ ಸ್ವತ್ತಿನ ಅಂದಾಜು ಮೌಲ್ಯ ₹70,000/- ಎಂದು ಅಂದಾಜಿಸಲಾಗಿದೆ.
ದೂರು ದಾಖಲಿಸಲು ವಿಳಂಬವೇಕೆ?
ಕಳ್ಳತನ ನಡೆದ ತಕ್ಷಣ ಇಲಾಖೆಯ ಸಿಬ್ಬಂದಿ ಗಮನಿಸಿದ್ದರೂ, ಪ್ರಕರಣ ದಾಖಲಿಸಲು ಸುಮಾರು 15 ದಿನಗಳು ಕಳೆದಿದೆ. ಕಳುವಾದ ಸ್ವತ್ತಿನ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ನೀಡಿ, ಅವರಿಂದ ಅಧಿಕೃತವಾಗಿ ದೂರು ನೀಡಲು ಅನುಮತಿ ಪಡೆಯುವ ಪ್ರಕ್ರಿಯೆಯಿಂದಾಗಿ ಈ ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಯಲ್ಲಾಪುರ ಮತ್ತು ಮುಂಡಗೋಡ ವಿಭಾಗದ ಜೂನಿಯರ್ ಟೆಲಿಕಾಂ ಆಫೀಸರ್ ಆದ ನಿತಿನ್ ಪ್ರಕಾಶ್ ಅವರು ಏಪ್ರಿಲ್ 2ರಂದು ಮುಂಡಗೋಡ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಡಗೋಡ ಪಿಎಸ್‌ಐ ಮಂಜುನಾಥ ಗೌಡರ ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಇತರ ಸುಳಿವುಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಸರ್ಕಾರಿ ಕಚೇರಿಯಲ್ಲೇ ಈ ರೀತಿ ಕಳ್ಳತನ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದ್ದು, ಕಳ್ಳರನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Laxmi News 24×7