ಬೆಂಗಳೂರು: ಮುಖ್ಯಮಂತ್ರಿಗಳು ಸದನದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಸುನೀಲ್ ಕುಮಾರ್ (Sunil Kumar) ಅವರು ಒತ್ತಾಯಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಚಿವರು ಸದನದಲ್ಲಿ ಹಾಜರಿರುವಂತೆ ಎಚ್ಚರಿಕೆಯನ್ನು ಸರ್ಕಾರ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಇವತ್ತು 230 ಲಿಖಿತ ಪ್ರಶ್ನೆಗಳ ಪೈಕಿ 80 ಪ್ರಶ್ನೆಗಳಿಗೆ ಮಾತ್ರ ಸರ್ಕಾರ ಉತ್ತರ ಕೊಟ್ಟಿದೆ. ಇದು ಸಹಜವಾಗಿ ಸ್ಪೀಕರ್ ಅವರಿಗೆ ಬೇಸರ ತರಿಸಿದೆ. ಸರ್ಕಾರದ ನಿಲುವನ್ನು ಖಂಡಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್ ಅವರು ಪೀಠವನ್ನು ಬಿಟ್ಟು ಹೋಗಿದ್ದಾರೆ. ಇದು ಆಘಾತಕಾರಿ ಸಂಗತಿ ಎಂದಿದ್ದಾರೆ.
ಸರ್ಕಾರಕ್ಕೆ ಸದನದ ಬಗ್ಗೆ, ಸಂವಿಧಾನದ ಕುರಿತು ಹಾಗೂ ಸದನದ ನಡವಳಿಕೆ ಬಗ್ಗೆ ಗೌರವ ಇದ್ದರೆ, ಮುಖ್ಯಮಂತ್ರಿಗಳು ಸ್ವತಃ ಈ ವಿಚಾರದಲ್ಲಿ ಪ್ರವೇಶ ಮಾಡಿ, ಪ್ರಶ್ನೆಗಳಿಗೆ ಉತ್ತರ ಕೊಡುವುದಷ್ಟೇ ಅಲ್ಲ. ಸದನವನ್ನು ಸಚಿವರು ಯಾವ ರೀತಿ ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸಲಿ. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಅಸಹಾಯಕರಾಗಿದ್ದಾರೆ. ಕಳೆದ ಬಾರಿ ಅಧಿವೇಶನದಲ್ಲಿ ಎಲ್ಲ ಸಚಿವರು ಅಧಿವೇಶನದ ಸಂದರ್ಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸ್ವತಃ ಮುಖ್ಯಮಂತ್ರಿಗಳು ಸಚಿವರಿಗೆ ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳ ಪತ್ರಕ್ಕೆ ಬೆಲೆ ಇಲ್ಲ. ಆಡಳಿತ ಹಿಡಿತ ತಪ್ಪಿದೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಅಧಿವೇಶನ ವರ್ಷದಲ್ಲಿ 40 ದಿನ ನಡೆಯುವುದೇ ಕಷ್ಟ. ಆ ಅಧಿವೇಶನದಲ್ಲಿ ಸದಸ್ಯರಿಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಯಾವುದೋ ಪ್ರಶ್ನೆಗೆ ಯಾವುದೋ ಉತ್ತರ ಕೊಡಲಾಗುತ್ತಿದೆ. ಇದೊಂದು ಪರಿಪಾಠವಾಗಿದೆ. ಈ ಹಿನ್ನೆಲೆ ಸ್ಪೀಕರ್ ಅವರು ಬೇಸರಗೊಂಡಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.
Laxmi News 24×7