24 ಗಂಟೆಗಳಲ್ಲಿ 7 ಆರೋಪಿಗಳನ್ನು ಬಂಧಿಸಿದ ಸಂಕೇಶ್ವರ ಪೊಲೀಸರು
ಹುಕ್ಕೇರಿ: ಸಂಕೇಶ್ವರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲೆ ನಡೆದ ತಲವಾರ್ ದಾಳಿಯ ಪ್ರಕರಣವನ್ನು ಸಂಕೇಶ್ವರ ಪೊಲೀಸರು ಕೇವಲ 24 ಗಂಟೆಗಳೊಳಗಾಗಿ ಬೇಧಿಸಿ ಏಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಕೇಶ್ವರ ಪಟ್ಟಣದ ಸಾಯಿ ಕಾರ್ಯಾಲಯದ ಸಮೀಪ ಸೋಮವಾರ ರಾತ್ರಿ ಅನಾಮಿಕ ಗುಂಪೊಂದು ಕಾರಿನಲ್ಲಿ ಬಂದು ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ದತ್ತಾ ಥೋರವತ್ ಅವರ ಮೇಲೆ ತಲವಾರ್‌ನಿಂದ ಕುತ್ತಿಗೆ ಹಾಗೂ ಕೈ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ದಾಳಿಯಿಂದ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಕೇಶ್ವರ ಪೊಲೀಸ್ ಠಾಣೆ ಅಧಿಕಾರಿಗಳು ತಕ್ಷಣ ತನಿಖೆ ಆರಂಭಿಸಿದರು. ತನಿಖೆಯಲ್ಲಿ ಶಾಮ್ ಯಾದವ್, ಸುನೀಲ ಪಾಂಡವ್, ಸುರಜ್ ವೈದ್ಯ, ಸಮೀರ ಪಾಟೀಲ, ಅಶೋಕ ಪಾಟೀಲ, ಸಂತೋಷ ಶೇಲಾರ ಹಾಗೂ ಸಂಕೇತ ಮೇತ್ರಿ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ಸಂಘಟನೆ ವಿಚಾರದಲ್ಲಿ ದತ್ತಾ ಥೋರವತ್ ಮುಂಚೂಣಿಯಲ್ಲಿ ಇದ್ದುದನ್ನು ಸಹಿಸಲಾಗದೆ ಹಾಗೂ ಶಾಮ್ ಯಾದವ್ ಅವರ ವೈರಿ ರಾಕೇಶ್ ಎಂಬಾತನಿಗೆ ದತ್ತಾ ಸಹಾಯ ಮಾಡುತ್ತಿರುವುದರಿಂದ ದ್ವೇಷ ಬೆಳೆದು, ದತ್ತಾನನ್ನು ಕೊಲೆ ಮಾಡಲು ಶಾಮ್ ಯಾದವ್ ಮತ್ತು ಸಮೀರ ಪಾಟೀಲ ಸಂಚು ರೂಪಿಸಿದ್ದರು ಎನ್ನುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ಹಾಗೂ ಗೋಕಾಕ್ ಡಿಎಸ್ಪಿ ಮಾರ್ಗದರ್ಶನದಲ್ಲಿ ಸಂಕೇಶ್ವರ ಪಿಐ ಎಸ್.ಎಂ. ಅವಜಿ ನೇತೃತ್ವದಲ್ಲಿ ತನಿಖೆ ನಡೆಯಿತು. ಯಮಕನಮರಡಿ ಪಿಐ ಜಾವೀದ್ ಮುಶಾಪುರಿ, ಹುಕ್ಕೇರಿ ಪಿಐ ಮಹಾಂತೇಶ್ ಬಸಾಪುರಿ, ಘಟಪ್ರಭಾ ಪಿಐ ಹೆಚ್.ಡಿ. ಮುಲ್ಲಾ, ಮೂಡಲಗಿ ಪಿಐ ಶ್ರೀಶೈಲ ಬ್ಯಾಕೋಡ, ಪಿಎಸ್‌ಐ ವಿಠಲ್ ನಾಯ್ಕ್, ಯು.ಎಸ್. ಶೆಟ್ಟನ್ನವರ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ತಂಡದ ಸತತ ಪ್ರಯತ್ನದಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದ್ದಾರೆ.
ಈ ವೇಗವಾದ ಕಾರ್ಯಾಚರಣೆಗೆ ಎಸ್‌ಪಿ ಕೆ. ರಾಮರಾಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Laxmi News 24×7