ಬೆಳಗಾವಿ: ‘ವಿದ್ಯಾವಂತ ಎಂಬ ಕಾರಣಕ್ಕೆ ಪರಿಶಿಷ್ಟ ಸಮುದಾಯದ ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧ ಪಿತೂರಿ ಮಾಡಿ, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ಕುತಂತ್ರಕ್ಕೆ ಅದೇ ಸಮುದಾಯದ ವ್ಯಕ್ತಿ ಬಳಸಿಕೊಳ್ಳಲಾಗಿದೆ. ಈ ಅನ್ಯಾಯದ ವಿರುದ್ಧ ನಾನೂ ಧ್ವನಿ ಎತ್ತುತ್ತೇನೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶಾಸಕರನ್ನು ತುಳಿಯುವ ಕೆಲಸ ಇಂದು, ನಿನ್ನೆಯಿಂದ ಅಲ್ಲ; 20 ವರ್ಷಗಳಿಂದಲೂ ನಡೆಯುತ್ತ ಬಂದಿದೆ. ಶೇ 74ರಷ್ಟು ಮತದಾರರನ್ನು ಹೊಂದಿದ ಸಮುದಾಯ ತುಳಿಯುವ ಪ್ರಯತ್ನ ನಡೆದಿದೆ. ಅಹಿಂದ ನಾಯಕರೆಂದು ಎಂದು ಹೇಳಿಕೊಳ್ಳುವ ನಾವೆಲ್ಲರೂ ಇದರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ’ ಎಂದರು.
‘ಚಂದ್ರು ಲಮಾಣಿ ಅವರಿಗೆ ನ್ಯಾಯ ಕೋರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಪಾರದರ್ಶಕ ತನಿಖೆಗೆ ಒತ್ತಾಯಿಸುತ್ತೇವೆ’ ಎಂದರು.
‘ನಾನು ಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ವ್ಯವಸ್ಥೆ ಬಗ್ಗೆ ಪ್ರಶ್ನಿಸುತ್ತೇವೆ. ನಮ್ಮದು ಪರಿಶಿಷ್ಟರ ಪರ ಸರ್ಕಾರ ಎನ್ನುವವರು ಅಧಿಕಾರಕ್ಕೆ ಇರುವಾಗಲೇ, ಇಂಥ ಘಟನೆ ನಡೆಯುತ್ತಿವೆ. ವೈ.ಸಂಪಂಗಿ ಅವರನ್ನು ಇದೇ ರೀತಿಯಾಗಿ ಪ್ರಕರಣದಲ್ಲಿ ಸಿಲುಕಿಸಿದರು’ ಎಂದು ಆರೋಪಿಸಿದರು.
‘ಪರಿಶಿಷ್ಟ ಸಮುದಾಯದ ಮತ್ತು ಅಹಿಂದ ಶಾಸಕರೇ ಏಕೆ ಇಂಥ ಬಲೆಗೆ ಬೀಳುತ್ತಾರೆ ಎಂಬುದು ನನ್ನ ಪ್ರಶ್ನೆ. ಚಂದ್ರು ಲಮಾಣಿ ಅವರ ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಒಬ್ಬ ಸ್ವಾಮೀಜಿ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನು ಬಳಸಿ ಈ ಕೃತ್ಯ ಮಾಡಿಸಿದ್ದಾರೆ. ಈ ಹಿಂದೆ ನನ್ನ ಮೇಲೆಯೂ ಏನು ಮಾಡಿದ್ದಾರೆ ಗೊತ್ತಲ್ಲವೇ. ನಾನೂ ಸಂತ್ರಸ್ತನೇ. ಆದರೆ, ಆ ಪ್ರಕರಣವೀಗ ನ್ಯಾಯಾಲಯದಲ್ಲಿದೆ. ಹಾಗಾಗಿ ಹೆಚ್ಚು ಪ್ರತಿಕ್ರಿಯಿಸಲಾರೆ’ ಎಮದರು.
‘ಭ್ರಷ್ಟಾಚಾರ ಆರೋಪ ಬಂದಾಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡುವುದು ಕಷ್ಟ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಿಜೆಪಿಯಲ್ಲಿ ಇರುವ ಗೊಂದಲವನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಹಾನಿಯಾಗಲಿದೆ’ ಎಂದರು.
‘ಸಿದ್ದರಾಮಯ್ಯ ಈಗಲೂ ನಮ್ಮ ನಾಯಕ. ಈ ಹಿಂದೆ ಅವರ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಅವರು ಈ ಹಿಂದಿನ ಮುಖ್ಯಮಂತ್ರಿಯಾಗಿ ಈಗ ಉಳಿದಿಲ್ಲ. ಸಿದ್ದರಾಮಯ್ಯ ಕುರುಬ ನಾಯಕರಲ್ಲ. ಅಹಿಂದ ವರ್ಗದ ನಾಯಕ ಎಂಬುದು ನನ್ನ ಅಭಿಮತ’ ಎಂದರು.
Laxmi News 24×7