Breaking News

ಏಕಕಾಲಕ್ಕೆ ಪಿಡಿಒಗಳಿಗೆ ಗ್ರೂಪ್‌ ‘ಬಿ’ಗೆ ಬಡ್ತಿ ನೀಡಲು ಆಗ್ರಹ

Spread the love

ಚಿತ್ರದುರ್ಗ: ’16 ವರ್ಷಗಳಿಂದಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಡ್ತಿಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಏಕಕಾಲಕ್ಕೆ ಗ್ರೂಪ್‌ ‘ಬಿ’ಗೆ ಉನ್ನತೀಕರಿಸಲು ರಾಜ್ಯಮಟ್ಟದಲ್ಲಿ ಬೃಹತ್‌ ಹೋರಾಟ ರೂಪಿಸಲಾಗುತ್ತಿದೆ’ ಎಂದು ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ‘ಬಿ’ ಗ್ರೇಡ್‌ ಉನ್ನತೀಕರಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ನಡಿಗೇರಿ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 5,964 ಗ್ರಾಮ ಪಂಚಾಯಿತಿಗಳಿದ್ದು, 1500 ಪಿಡಿಒಗಳನ್ನು ಮಾತ್ರ ಸರ್ಕಾರ ‘ಬಿ’ ಗ್ರೇಡ್‌ ಹುದ್ದೆಗೇರಿಸಿದೆ. ಅದರಂತೆ ಉಳಿದ ಎಲ್ಲಾ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೂ ಬಡ್ತಿ ಸಿಗಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕಿಳಿಯಬೇಕಾಗುತ್ತದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹಿತದೃಷ್ಟಿಯಿಂದ ಈ ಹೋರಾಟ ಅತ್ಯಂತ ನಿರ್ಣಾಯಕವಾಗಿದೆ. ಪಿಡಿಒಗಳ ಮೇಲಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗೆ ಪೂರಕವಾಗಿ ಹುದ್ದೆಗಳನ್ನು ತಕ್ಷಣವೇ ಗ್ರೂಪ್‌ ‘ಬಿ’ ಶ್ರೇಣಿಗೆ ಮೇಲ್ದರ್ಜೆಗೇರಿಸಬೇಕೆಂದು’ ಒತ್ತಾಯಿಸಿದರು.

‘ಮಹಾತ್ಮ ಗಾಂಧಿಜೀ ಕಂಡ ಕನಸು ನನಸಾಗಬೇಕಾದರೆ ಸ್ಥಳೀಯ ಸರ್ಕಾರಗಳು ಬಲಿಷ್ಠವಾಗಬೇಕು. ಒಂದೇ ಇಲಾಖೆಯಲ್ಲಿ ತಾರತಮ್ಯವಿರುವುದರಿಂದ ಜನರ ಬದುಕನ್ನು ಹಸನಾಗಿಸುವುದು ಕಷ್ಟವಾಗುತ್ತಿದೆ’ ಎಂದು ಸಂಕಷ್ಟ ತೋಡಿಕೊಂಡರು.

‘ಪಿಡಿಒಗಳು ಸರ್ಕಾರದ ನೂರಾರು ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾಯಕಯೋಗಿಗಳು. ನಮ್ಮ ದಶಕಗಳ ಬೇಡಿಕೆಯನ್ನು ಸರ್ಕಾರ ಕೂಡಲೇ ಪರಿಗಣಿಸಿ ನ್ಯಾಯ ಒದಗಿಸಬೇಕು. ಆಡಳಿತ ವಿಕೇಂದ್ರೀಕರಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಪಿಡಿಒಗಳು’ ಎಂದು ವಿವರಿಸಿದರು.

‘ಜೇಷ್ಠತಾ ಪಟ್ಟಿ ಕಾರಣಕ್ಕೆ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, ಸರ್ಕಾರ ಎಲ್ಲರನ್ನೂ ಗ್ರೂಪ್‌ ‘ಬಿ’ ಎಂದು ಪರಿಗಣಿಸಲು ಯಾವ ತೊಂದರೆಯೂ ಇಲ್ಲ. ಪಿಡಿಒ ಹುದ್ದೆಯ ನಂತರದ ಪದೋನ್ನತಿ ಸಹಾಯಕ ನಿರ್ದೇಶಕ ಸ್ಥಾನ. ಆದರೆ, ಕೆಲ ಪಿಡಿಒಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಪ್ರಕರಣ ಇತ್ಯರ್ಥ ಆಗುವವರೆಗೆ ‘ಬಿ’ ಗ್ರೂಪ್‌ ಮಾಡಲಿ’ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌ ಆಗ್ರಹಿಸಿದರು.

‘ಗ್ರೂಪ್‌ ‘ಬಿ’ಗೆ ಉನ್ನತೀಕರಣ ಮಾಡುವುದರಿಂದ ಸರ್ಕಾರಕ್ಕೆ ನಷ್ಟ ಆಗುವುದಿಲ್ಲ. ಈಗಾಗಲೇ ನಮ್ಮ ವೇತನ ಅದನ್ನು ದಾಟಿ ಮುಂದಕ್ಕೆ ಸಾಗಿದೆ. ಕೇವಲ ಉನ್ನತೀಕರಣ ಮಾತ್ರ ಬೇಕಾಗಿದೆ. ಇದರಿಂದ ಇಲಾಖೆಯಲ್ಲಿ ಹೊಸ ಚೈತನ್ಯ ಮೂಡಲಿದ್ದು, ಸರ್ಕಾರದ ಕೆಲಸಗಳು ಮತ್ತಷ್ಟು ವೇಗವಾಗಿ ನಡೆಯಲಿವೆ’ ಎಂದು ಉಪಾಧ್ಯಕ್ಷ ಉಸ್ಮಾನ್‌ ನದಾಫ್‌ ತಿಳಿಸಿದರು.

ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಜಯಗೌಡ ಪಾಟೀಲ್‌, ಪಿಡಿಒ ಹನುಮಂತ ಕರ್ಣಕೋಟೆ, ನಾಗರಾಜ್‌ ಇದ್ದರು.


Spread the love

About Laxminews 24x7

Check Also

ರಾಜ್ಯದಲ್ಲಿ ಮತ್ತೆ ಐಟಿ ಸದ್ದು; ಮಾಜಿ ಸಚಿವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

Spread the love ಚಿತ್ರದುರ್ಗ: ರಾಜ್ಯದಲ್ಲಿ ಆಗಾಗ ಕೇಳಿ ಬರುತ್ತಿರುವ ಐಟಿ ಸದ್ದು ಮತ್ತೊಮ್ಮೆ ಮೊಳಗಿದೆ. ಅರ್ಥಾತ್, ರಾಜ್ಯದ ಮಾಜಿ ಸಚಿವರೊಬ್ಬರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ