ಬೆಳಗಾವಿ: ಸಂಸತ್ತಿನ ನಿಯಮಾವಳಿಗಳ ಅರಿವಿಲ್ಲದಂತೆ ನಡೆದುಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೀದಿಯ ಉಢಾಳ ಹುಡುಗನಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಅಪಕ್ವ ನಡವಳಿಕೆಯಿಂದ ಸ್ವತಃ ಕಾಂಗ್ರೆಸ್ ಸಂಸದರೇ ಬೇಸರಗೊಂಡಿದ್ದಾರೆ
ದೆಹಲಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಸಕಾರಾತ್ಮಕ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದ ರಾಹುಲ್ ಗಾಂಧಿ, ವಿದೇಶಕ್ಕೆ ಹೋದಾಗಲೆಲ್ಲಾ ಭಾರತ ಮತ್ತು ಮೋದಿಯವರನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಟೀಕೆ ಮಾಡಿದರು.
ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷದಂತೆ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಯ ಮೇಲೆ ಪೂರ್ವಯೋಜಿತವಾಗಿ ಕಲ್ಲು ಎಸೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋಮು ಗಲಭೆಗಳು ಹೆಚ್ಚುತ್ತಿವೆ. ಮುಸ್ಲಿಂ ತುಷ್ಠೀಕರಣಕ್ಕಾಗಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಈ ಗಲಾಟೆ ಪ್ರಕರಣದಲ್ಲಿ ಅಸಲಿ ಆರೋಪಿಗಳನ್ನು ಬಿಟ್ಟು ಪೊಲೀಸರು ಕೇವಲ ನಾಲ್ವರು ಅಮಾಯಕರನ್ನು ಬಂಧಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ಲೋಕಾಯುಕ್ತ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಲಮಾಣಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ, ಸರ್ಕಾರದ ಮೇಲಿರುವ 37 ಸಾವಿರ ಕೋಟಿ ರೂ. ಬಾಕಿ ಬಿಲ್ ಹಾಗೂ ಕಮಿಷನ್ ಹಗರಣದ ಹಾದಿ ತಪ್ಪಿಸಲು ಈ ದಾಳಿ ನಡೆದಂತಿದೆ. ಹಿಂದೆ ಸಂಪಂಗಿ ಅವರಿಗೂ ಹೀಗೆಯೇ ಆಗಿತ್ತು. ಲೋಕಾಯುಕ್ತ ದಾಳಿಗಳಲ್ಲಿ ದಲಿತ ಸಮುದಾಯದ ಶಾಸಕರನ್ನೇ ಗುರಿ ಮಾಡಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸಚಿವ ರಾಜಣ್ಣ ಅವರೇ ಹೇಳಿದಂತೆ, ಇವತ್ತು ಯಾರು ಸತ್ಯ ಹರಿಶ್ಚಂದ್ರರಿದ್ದಾರೆ. ಲೋಕಾಯುಕ್ತ ಮುಖ್ಯಸ್ಥರು ಕಳೆದ 10 ವರ್ಷಗಳಲ್ಲಿ ಯಾರ ಮೇಲೆ ದಾಳಿಯಾಗಿದೆ ಮತ್ತು ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಈಗ ಕುರುಬ ಸಮುದಾಯದ ಕಾರ್ಡ್ ಬಳಸುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರುವಂಥದ್ದಲ್ಲ. ಡಿಕೆ ಶಿವಕುಮಾರ್ ಅವರೊಂದಿಗಿನ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಒಪ್ಪಂದದ ಒತ್ತಡದಿಂದ ಪಾರಾಗಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು.
Laxmi News 24×7