ಬೆಂಗಳೂರು: ಹಿಂದೂ ಉತ್ತರಾಧಿಕಾರ ಕಾಯಿದೆ-1956ರ ಸೆಕ್ಷನ್ 6ರಲ್ಲಿರುವ ತಿದ್ದುಪಡಿಯಲ್ಲಿ ಮೃತಪಟ್ಟ ವ್ಯಕ್ತಿಯ ತಾಯಿ ಮತ್ತು ವಿಧವಾ ಪತ್ನಿಯ ಹಕ್ಕುಗಳ ಕುರಿತ ಅಸ್ಪಷ್ಟತೆಗಳ ಕುರಿತಂತೆ ಕೇಂದ್ರ ಸರ್ಕಾರ ಕೆಲವು ನಿಬಂಧನೆಗಳಿಗೆ ಮರು ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ ಎಂದು ಹೈಕೋರ್ಟ್ ತಿಳಿಸಿದೆ.
ತನ್ನ ಮೃತಪಟ್ಟ ಪತಿಗೆ ಸೇರಿದ ಆಸ್ತಿಗಳ ಮೇಲಿನ ಹಕ್ಕುಗಳ ಕುರಿತಂತೆ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಕೊಪ್ಪದ ಶರಣವ್ವ ಎಂಬವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಮತ್ತು ನ್ಯಾ.ಬಿ.ಮುರಳೀಧರ್ ಪೈ ಅವರಿದ್ದ ನ್ಯಾಯಪೀಠ ಕೇಂದ್ರಕ್ಕೆ ಈ ಸೂಚನೆ ನೀಡಿತು.
2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6ಕ್ಕೆ ತಂದಿರುವ ಜಂಟಿಯಾಗಿರುವ ಪಿತ್ರಾರ್ಜಿತ ಆಸ್ತಿಯ ವಿಭಜನೆಯ ಕುರಿತಾದ ವಿಚಾರದಲ್ಲಿ ವಿಧವೆ ಮತ್ತು ಆಕೆಯ ಅತ್ತೆಯ (ಪತಿಯ ತಾಯಿ) ಕುರಿತು ಕೆಲವು ಗೊಂದಲಗಳಿರುವುದನ್ನು ಈ ಸಂದರ್ಭದಲ್ಲಿ ಸಂಬಂಧಿತರ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಸೆಕ್ಷನ್ 6ರಲ್ಲಿ ವಿಧವಾ ಪತ್ನಿ ಮತ್ತು ತಾಯಿಯ ಬಗ್ಗೆ ಉಲ್ಲೇಖವಿಲ್ಲ. ತಿದ್ದುಪಡಿ ಮಾಡದ ಸೆಕ್ಷನ್ 6ರಲ್ಲಿ ನಿರ್ದಿಷ್ಟವಾಗಿ ಮೊದಲ ಪ್ರಾವಿಸೊದಲ್ಲಿ ಪುತ್ರ ಮತ್ತು ಪುತ್ರಿಯ ಜೊತೆಗೆ ವಿಧವಾ ಪತ್ನಿ ಮತ್ತು ತಾಯಿಗೆ ವಿಭಾಗವನ್ನು (ಭಾಗ ನೀಡುವುದು) ಖಾತರಿಪಡಿಸಲಾಗಿತ್ತು. ಆದರೆ, ತಿದ್ದುಪಡಿಯಾಗಿರುವ ಸೆಕ್ಷನ್ 6ರಲ್ಲಿ ವಿಧವಾ ಪತ್ನಿ ಮತ್ತು ತಾಯಿ ಬಗ್ಗೆ ಉಲ್ಲೇಖವಿಲ್ಲ ಎಂದು ನ್ಯಾಯಪೀಠ ಹೇಳಿತು.
ಆದರೆ, ಶಾಸನ ರೂಪಿಸುವ ಶಾಸನ ಸಭೆ ಈ ಸಂಬಂಧ ಯೋಚಿಸಿರಲಿಕ್ಕಿಲ್ಲ ಅಥವಾ ವಿಧವಾ ಪತ್ನಿ ಅಥವಾ ತಾಯಿಯ ಹಕ್ಕನ್ನು ಕಸಿದುಕೊಳ್ಳುವ ಯೋಚನೆ ಹೊಂದಿದ್ದರು ಎನ್ನಲಾಗದು. ವರ್ಗ-1ರಲ್ಲಿ ವಿಧವಾ ಪತ್ನಿ, ತಾಯಿ, ಪುತ್ರನ ವಿಧವಾ ಪತ್ನಿ ಇತ್ಯಾದಿಗೆ ಸಂಬಂಧಿಸಿದ ವಿಷಯಗಳನ್ನು ಅಚಾತುರ್ಯದಿಂದ ತಿದ್ದುಪಡಿ ಸೆಕ್ಷನ್ 6ರಲ್ಲಿ ಕೈಬಿಡಲಾಗಿದೆ.
ಸಾಮಾನ್ಯವಾಗಿ ತಿದ್ದುಪಡಿಯಾಗಿರುವ ಸೆಕ್ಷನ್ 6 ಓದಿದರೆ ವರ್ಗ-1ರ ಉಲ್ಲೇಖವಿಲ್ಲ. ಷೆಡ್ಯೂಲ್ನ ವರ್ಗ-1ಕ್ಕೆ ಅದನ್ನು ಸೇರ್ಪಡೆ ಮಾಡಿ ತಿದ್ದುಪಡಿ ಮಾಡುವುದು ಗೊಂದಲ ನಿವಾರಿಸುವ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ನ್ಯಾಯಾಲಯ ವಿವರಿಸಿದ್ದು, ಆದೇಶದ ಪ್ರತಿಯನ್ನು ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಪರಿಗಣನೆಗಾಗಿ ಕಳುಹಿಸಿಕೊಡುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿ ಆದೇಶಿಸಿದೆ.
Laxmi News 24×7